ADVERTISEMENT

ಹಾಕಿ: ಫೈನಲ್‌ನತ್ತ ಭಾರತದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಹಾಕಿ: ಫೈನಲ್‌ನತ್ತ ಭಾರತದ ಹೆಜ್ಜೆ
ಹಾಕಿ: ಫೈನಲ್‌ನತ್ತ ಭಾರತದ ಹೆಜ್ಜೆ   

ನವದೆಹಲಿ: ಮತ್ತೆ ಮಿಂಚಿದ ಸಂದೀಪ್ ಸಿಂಗ್ `ಹ್ಯಾಟ್ರಿಕ್~ ಸಾಧನೆಯಿಂದ ಮಂಗಳವಾರ ರಾತ್ರಿ ಭಾರತ ಪುರುಷರ ತಂಡವು ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಯಿತು.

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭರತ್ ಚೆಟ್ರಿ ಬಳಗವು 6-2ರಿಂದ ಫ್ರಾನ್ಸ್ ವಿರುದ್ಧ ವಿಜಯಕಹಳೆ ಮೊಳಗಿಸಿತು. ಮೈದಾನದಲ್ಲಿ ಸೇರಿದ್ದ ಸುಮಾರು ಸಾವಿರಕ್ಕೂ ಹೆಚ್ಚು ಅಭಿಮಾನಿಗಳ `ಸೋನಿಹಾಲ್ ಸತ್‌ಶ್ರೀ ಅಕಾಲ್~, `ಭಾರತ್ ಮಾತಾ ಕಿ ಜೈ~, ಘೋಷಣೆಗಳು ನಿರಂತರವಾಗಿ ಮೊಳಗಲು ಪಂಜಾಬಿ ಹುಡುಗ ಸಂದೀಪ್ ಸಿಂಗ್ ಕಾರಣರಾದರು. ಅವರು ಕಳೆದ ಪಂದ್ಯದಲ್ಲಿಯೂ ಮೂರು ಗೋಲು ಹೊಡೆದು ತಂಡದ ಜಯಕ್ಕೆ ಕಾರಣರಾಗಿದ್ದರು.

ತಾಳಮೇಳಕ್ಕೆ ಶರಣಾದ ಫ್ರಾನ್ಸ್: ಮೊದಲ ಎರಡು ಪಂದ್ಯಗಳಲ್ಲಿ ಸುಲಭವಾಗಿ ಜಯಿಸಿದ್ದ ಭಾರತದ ಬಳಗಗಕ್ಕೆ ಫ್ರಾನ್ಸ್ ಸುಲಭವಲ್ಲ ಎನ್ನುವ ನಿರೀಕ್ಷೆ ಹುಸಿಯಾಯಿತು. ವೇಗ ಮತ್ತು ಆಟಗಾರರ ನಡುವಿನ ಅದ್ಭುತ ತಾಳಮೇಳ  ಪ್ರದರ್ಶಿಸಿದ ಅತಿಥೇಯರು  ಗೆಲುವಿನ ಹಿಡಿತವನ್ನು ಬಿಗಿಗೊಳಿಸಿದರು.

ನಾಲ್ಕನೇ ನಿಮಿಷದಲ್ಲಿಯೇ ಗೋಲಿನ ಬೇಟೆ ಆರಂಭವಾಯಿತು. ಎದುರಾಳಿ ರಕ್ಷಣಾ ವಲಯದಲ್ಲಿ ಮಿಡ್‌ಫೀಲ್ಡರ್ ಸರವಣಜೀತ್‌ಸಿಂಗ್ ಕೊಟ್ಟ ಪಾಸ್ ಅನ್ನು ಶಿವೇಂದ್ರಸಿಂಗ್ ಪುಷ್ ಮೂಲಕ ಗೋಲುಪೆಟ್ಟಿಗೆ ಸೇರಿಸಿದರು. ಫ್ರೆಂಚ್ ಆಟಗಾರ ಮಾಡಿದ ತಪ್ಪಿಗೆ 9ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಸಂದೀಪ್ ಸಿಂಗ್ ಮಧ್ಯಮ ಎತ್ತರದಲ್ಲಿ ಮಾಡಿದ ಡ್ರ್ಯಾಗ್ ಫ್ಲಿಕ್ ಗೋಲ್‌ಕೀಪರ್ ಮಥಾಯಿಸ್ ಡೆರಿಕ್‌ನೆಸ್ ಅಂದಾಜಿಗೆ ಸಿಗದೇ ಚೆಂಡು ಗುರಿಮುಟ್ಟಿತು.

ತೀವ್ರ ಒತ್ತಡದಲ್ಲಿದ್ದ ಫ್ರೆಂಚ್ ಪಡೆ ಬಿರುಸಿನ ಆಟಕ್ಕೆ ಇಳಿಯಿತು. ಈ ಸಂದರ್ಭದಲ್ಲಿ ಚೆಟ್ರಿ ಬಳಗ ಆಟಕ್ಕೆ ಮತ್ತಷ್ಟು ವೇಗ ನೀಡಿತು. ಸರಾಸರಿ ಎರಡು ನಿಮಿಷಕ್ಕೆ ಒಮ್ಮೆಯಂತೆ ಆಟಗಾರರ ಬದಲಾವಣೆ ನಡೆಯಿತು.
 
29ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್ ಎದುರಾಳಿ ಆಟಗಾರನ ಹಿಡಿತದಿಂದ ಚೆಂಡನ್ನು ಕಿತ್ತುಕೊಂಡು ಕನ್ನಡದ ಹುಡುಗ ಎಸ್.ವಿ. ಸುನಿಲ್‌ಗೆ ಪಾಸ್ ಕೊಟ್ಟರು.

ಮಿಂಚಿನಂತೆ ಕ್ರಮಿಸಿದ ಕೊಡಗಿನ ಹುಡುಗ ಫ್ರಾನ್ಸ್‌ನ ರಕ್ಷಣಾ ಕೋಟೆಗೆ ನುಗ್ಗಿದರು. ಈ ಸಂದರ್ಭದಲ್ಲಿ ಎದುರಾಳಿ ಆಟಗಾರ ವೆರೆರಾ ಫ್ರೆಡ್ರಿಕ್ ಸುನಿಲ್ ಎರಡು ಕಾಲುಗಳ ನಡುವೆ ಸ್ಟಿಕ್ ಹಾಕಿ ಬೀಳಿಸಿದರು. ಅಂಪೈರ್ ರೈಟ್ ಜಾನ್ ಪೆನಾಲ್ಟಿ ಸ್ಟ್ರೋಕ್ ಕೊಟ್ಟಿದ್ದನ್ನು,  ಸಂದೀಪ್ ಗೋಲಿನಲ್ಲಿ ಪರಿವರ್ತಿಸಿದರು.

ಪ್ರಥಮಾರ್ಧ ಮುಗಿಯಲು 10 ಸೆಕೆಂಡ್ ಬಾಕಿಯಿದ್ದಾಗ ಫ್ರಾನ್ಸಿಗೆ ಪೆನಾಲ್ಟಿ ಕಾರ್ನ್ ಸಿಕ್ಕಿತು. ಇದನ್ನು ಲುಕಾಸ್ ಸೆವೆಸ್ಟರ್ ಹಿಟ್ ಮೂಲಕ ಗೋಲು ಗಳಿಸಿ ನಗೆಬೀರಿದರು.

ಆದರೆ ವಿರಾಮದ ನಂತರ ಮತ್ತೆ ನಕ್ಕಿದ್ದು ಸಂದೀಪ್‌ಸಿಂಗ್, 37ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಹಿಟ್ ಮೂಲಕ ಗೋಲುಪೆಟ್ಟಿಗೆ ಸೇರಿಸಿದ ಅವರು ಹ್ಯಾಟ್ರಿಕ್ ಸಾಧಿಸಿದರು. ಎರಡು ನಿಮಿಷದ ನಂತರ ಶಿವೇಂದ್ರಸಿಂಗ್ ಕೊಟ್ಟ ಪಾಸ್ ಅನ್ನು ಎಸ್.ವಿ. ಸುನೀಲ್ ವೇಗವಾಗಿ ಗೋಲುಪೆಟ್ಟಿಗೆ ಸೇರಿಸಿದರು.

  57ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಗಳಿಸಿದ ಫ್ರಾನ್ಸ್ ಗೆಲ್ಲಲ್ಲು ಹಲವು ತಂತ್ರಗಳನ್ನು ಉಪಯೋಗಿಸಿದರೂ ಸಾಧ್ಯವಾಗಲಿಲ್ಲ. ಬಿಸಿಯೇರಿದ್ದ ಆಟದಲ್ಲಿ ಸಂದೀಪ್ ಸಿಂಗ್ ಅವರನ್ನು ಕೆಡವಿದ ಫ್ರೆಂಚ್ ಆಟಗಾರ ಅಂಪೈರ್ ಕಡೆಯಿಂದ ಎಚ್ಚರಿಕೆ ಪಡೆದರು.
 
ಗುರುವಿಂದರ್ ಸಿಂಗ್ ಚಂಡಿ ಮತ್ತು ವೆರೆರಾ ಹಸಿರು ಕಾರ್ಡ್ ದರ್ಶನವನ್ನೂ ಪಡೆಯಬೇಕಾಯಿತು. 62ನೇ ನಿಮಿಷದಲ್ಲಿ ತುಷಾರ್ ಖಾಂಡ್ಕರ್ ಸೆಂಟರ್ ಫಾರ್ವರ್ಡ್‌ನಿಂದ ಹಿಟ್ ಮಾಡಿ, ತಂಡದ ಗೋಲುಗಳನ್ನು ಆರಕ್ಕೇರಿಸಿದರು. ಇದಕ್ಕೂ ಮುನ್ನ ಪೆನಾಲ್ಟಿಯಲ್ಲಿ ಫ್ರಾನ್ಸ್‌ನ ಜೀನ್‌ಜೀನ್ ಸಬಾಸ್ಟಿಯನ್ ಗೋಲು ಗಳಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ.

ಅಗ್ರಸ್ಥಾನದಲ್ಲಿ ಆತಿಥೇಯರು: ಟೂರ್ನಿಯ ಮೂರು ಪಂದ್ಯಗಳನ್ನೂ ಗೆದ್ದು ಒಟ್ಟು 9 ಪಾಯಿಂಟ್ ಕಲೆಹಾಕಿರುವ ಆತಿಥೇಯ ಭಾರತದ ಪುರುಷರ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೇ ಭಾರತವು 25 ಗೋಲುಗಳ ಅಂತರವನ್ನೂ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.