ADVERTISEMENT

ಹಾಕಿ: ಭಾರತಕ್ಕೆ ಮತ್ತೊಂದು ಜಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ನವದೆಹಲಿ (ಪಿಟಿಐ): ಪಂದ್ಯದ ಕೊನೆಯವರೆಗೂ ಉತ್ತಮ ಹೋರಾಟ ತೋರಿದ ಭಾರತ ಪುರುಷರ ಹಾಕಿ ತಂಡದವರು ಇಲ್ಲಿ ನಡೆಯುತ್ತಿರುವ ಕಾರ್ಬನ್ ಕಪ್ ಹಾಕಿ ಟೆಸ್ಟ್ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 2-1ಗೋಲುಗಳಿಂದ ಗೆಲುವು ಸಾಧಿಸಿದರು.

ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಗೆಲುವು ಪಡೆಯಲು ಸಾಕಷ್ಟು ಕಷ್ಟಪಡಬೇಕಾಯಿತು.

ಸ್ಟ್ರೈಕರ್ ಸಂದೀಪ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಕೊನೆಯ ಗೋಲು ಗಳಿಸಿದರು. ಇದರಿಂದ ಆತಿಥೇಯ ತಂಡಕ್ಕೆ ಐದು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಮೊದಲ ಆತಿಥೇಯ ತಂಡ ಪಂದ್ಯದಲ್ಲಿ 4-0ರಲ್ಲಿ ಗೆಲುವು ಪಡೆದಿತ್ತು.

ಆರಂಭದಿಂದಲೂ ಪಂದ್ಯ ರೋಚಕ ಪೈಪೋಟಿಯಿಂದ ಕೂಡಿತ್ತು. ಭಾರತದ ಚಿಂಗಲ್ಸನಾ ಸಿಂಗ್ 33ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ 1-0ರಲ್ಲಿ ಮುನ್ನಡೆ ತಂದುಕೊಟ್ಟರು.

ವಿರಾಮದ ನಂತರ ಪ್ರವಾಸಿ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಲೊವೊ 43ನೇ ನಿಮಿಷ ಗೋಲು ಗಳಿಸಿ ಸಮಬಲ ಸಾಧಿಸಿದರು. ಪಂದ್ಯ ಡ್ರಾ ಹಾದಿ ಹಿಡಿದಾಗ ಸಂದೀಪ್ 68ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯದ ಗೆಲುವಿಗೆ ಕಾರಣರಾದರು.

ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಪ್ರವಾಸಿ ತಂಡಕ್ಕೆ ಗೋಲು ಗಳಿಸುವ ಅವಕಾಶವಿತ್ತು. ಆದರೆ, ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಇದಕ್ಕೆ ಅವಕಾಶ ನೀಡಲಿಲ್ಲ. ಹಾಗೆಯೇ ಭಾರತ ಕೂಡಾ  ಕೆಲವು ಅವಕಾಶಗಳನ್ನು ಹಾಳುಮಾಡಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.