ADVERTISEMENT

ಹಾಕಿ ಭಾರತಕ್ಕೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ನವದೆಹಲಿ: ಮಂಗಳವಾರ ಸಂಜೆ ಭಾರತ ತಂಡದ `ರಾಣಿ~ಯರ ದರ್ಬಾರಿಗೆ ಪೊಲೆಂಡ್‌ನ ವನಿತೆಯರು ಸೋಲೊಪ್ಪಿಕೊಂಡರು.

ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿಯ ಮಹಿಳಾ ವಿಭಾಗದ ಮೂರನೇ ಪಂದ್ಯದಲ್ಲಿ ರಿತು ರಾಣಿ, ರಾಣಿ ರಾಂಪಾಲ್ ಮತ್ತು ಪೂನಂ ರಾಣಿ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಭಾರತ 3-0ಯಿಂದ ಪೊಲೆಂಡ್ ಅನ್ನು ಸೋಲಿಸಿತು. ಜೊತೆಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ತಂಡ ಪ್ರಥಮ ಸ್ಥಾನಕ್ಕೆ ಜಿಗಿಯಿತು.

ರಾಣಿಯರ ಆಟ: ಪಂದ್ಯದ 14ನೇ ನಿಮಿಷದಲ್ಲಿ ಪೂನಂ ರಾಣಿ `ಡಿ~ವಲಯದಲ್ಲಿ ಪಾಸ್ ನೀಡುವ ಸಂದರ್ಭದಲ್ಲಿ ಎದುರಾಳಿ ಗೋಲ್‌ಕೀಪರ್ ಮುಂದೆ ಓಡಿ ಬಂದಿದ್ದನ್ನು ಗಮನಿಸಿದ ರಿತುರಾಣಿ ಬಲಬದಿ ಯಿಂದ ಮಾಡಿದ ಹಿಟ್ ಗೋಲುಪೆಟ್ಟಿಗೆ ಸೇರಿತು.

ಇದಕ್ಕೂ ಮುನ್ನ ಎಂಟು ಬಾರಿ ಭಾರತದ ಆಟಗಾರ್ತಿಯರು ಗೋಲು ಹೊಡೆಯುವ ಪ್ರಯತ್ನಗಳು ಸ್ವಲ್ಪ ಅಂತರದಲ್ಲಿ ತಪ್ಪಿದ್ದವು. ಪ್ರಥಮ ಅವಧಿಯಲ್ಲಿ ಉಭಯ ತಂಡಗಳಿಗೆ ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಗಲಿಲ್ಲ.

ವಿರಾಮದ ಮರುಕ್ಷಣವೇ ಮಿಂಚಿದ ಫಾರ್ವರ್ಡ್ ಲೈನ್ ಆಟಗಾರ್ತಿ ರಾಣಿ ರಾಂಪಾಲ್  ಮೂವರು ಎದುರಾಳಿ ಡಿಫೆಂಡರ್‌ಗಳನ್ನು ವಂಚಿಸಿ ಚೆಂಡಿಗೆ ಗೋಲುಪೆಟ್ಟಿಗೆಯತ್ತ ಕಳಿಸಿದರು.

62ನೇ ನಿಮಿಷದಲ್ಲಿ  ಪೂನಂ ರಾಣಿ  ಗೋಲುಪೆಟ್ಟಿಗೆಯ ಬಲಬದಿಯಿಂದ ದೀಪಿಕಾ ಠಾಕೂರ್ ಕೊಟ್ಟ ಪಾಸ್ ಅನ್ನು ಪುಷ್ ಮಾಡಿ ಮೂರನೇ ತಂಡಕ್ಕೆ ಮೂರನೇ  ಗೋಲು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.