ADVERTISEMENT

ಹಾಕಿ: ಹುಬ್ಬಳ್ಳಿ ತಂಡದ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 16:50 IST
Last Updated 1 ಫೆಬ್ರುವರಿ 2011, 16:50 IST
ಹಾಕಿ: ಹುಬ್ಬಳ್ಳಿ ತಂಡದ ಶುಭಾರಂಭ
ಹಾಕಿ: ಹುಬ್ಬಳ್ಳಿ ತಂಡದ ಶುಭಾರಂಭ   

ಬೆಂಗಳೂರು: ಆತಿಥೇಯ ಬೆಂಗಳೂರು ಕೊಡವ ಸಮಾಜ ಹಾಕಿ ತಂಡದವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಲೀಗ್ ಪಂದ್ಯದಲ್ಲಿ ಗೆಲುವು ಪಡೆದರು. ಉದ್ಘಾಟನಾ ಪಂದ್ಯದಲ್ಲಿ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ತಂಡ ಶುಭಾರಂಭ ಮಾಡಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಲೀಗ್ ಪಂದ್ಯದಲ್ಲಿ ಕೊಡವ ಸಮಾಜ ತಂಡ 4-2ಗೋಲುಗಳಿಂದ ಐಟಿಐ ತಂಡವನ್ನು ಮಣಿಸಿತು.

ಪಂದ್ಯದ ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿದ್ದ ಕೊಡವ ಸಮಾಜ ತಂಡ ಉತ್ತರಾರ್ಧದಲ್ಲಿ ಉತ್ತಮ ಹೋರಾಟದ ಪ್ರದರ್ಶನ ತೋರಿತು. ವಿಜಯಿ ತಂಡದ ಅವಿನಾಶ್, ಸೋಮಣ್ಣ, ಬಸವರಾಜ್, ಪ್ರಮೋದ್ ಹಾಗೂ ಐಟಿಐ ತಂಡದ ಫ್ರೆಡ್ರಿಕ್, ವಿವೇಕ್ ಚೆಂಡನ್ನು ಗುರಿಮುಟ್ಟಿಸಿದರು.ಇನ್ನೊಂದು ಲೀಗ್ ಪಂದ್ಯದಲ್ಲಿ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ತಂಡದವರು ಸುಲಭ ಜಯಗಳಿಸಿ ಶುಭಾರಂಭ ಮಾಡಿದರು.

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಹುಬ್ಬಳ್ಳಿ  ತಂಡ 6-1 ಗೋಲುಗಳಿಂದ ಬೆಂಗಳೂರಿನ ಫ್ಲೈಯಿಂಗ್ ಹಾಕಿ ಕ್ಲಬ್ ತಂಡವನ್ನು ಪರಾಭವಗೊಳಿಸಿತು.ವಿಜಯಿ ತಂಡದ ನಾಗೇಶ್ ಬೋಯಾರ್ (2), ನಾಗರಾಜ್, ಪರಮೇಶ್ (2), ಹಸನ್ ಅಲಿ  ಹಾಗೂ ಫ್ಲೈಯಿಂಗ್ ಹಾಕಿ ಕ್ಲಬ್ ತಂಡದ ರಮೇಶ್ ಗೋಲು ತಂದಿತ್ತರು. ಬುಧವಾರದ ಪಂದ್ಯಗಳು: ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ‘ಬಿ’-ಡಿ.ವೈ.ಎಸ್.ಎಸ್. ನಡುವೆ ಮಧ್ಯಾಹ್ನ 3-00ಕ್ಕೆ ಹಾಗೂ ಮಧ್ಯಾಹ್ನ 4-00ಕ್ಕೆ ರೈಲ್ವೆ ಗಾಲಿ ಕಾರ್ಖಾನೆ (ಆರ್.ಡಬ್ಲ್ಯು.ಎಫ್)-ಆರ್.ಬಿ.ಐ. ನಡುವೆ ಪಂದ್ಯ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.