ADVERTISEMENT

ಹಾಲಿ ಚಾಂಪಿಯನ್ನರ ಮೇಲೆ ನಿರೀಕ್ಷೆ

ಇಂದಿನಿಂದ ಆಸ್ಟ್ರೇಲಿಯಾ ಓಪನ್‌ ಟೆನಿಸ್: ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:46 IST
Last Updated 17 ಜನವರಿ 2016, 19:46 IST
ಹಾಲಿ ಚಾಂಪಿಯನ್ನರ ಮೇಲೆ ನಿರೀಕ್ಷೆ
ಹಾಲಿ ಚಾಂಪಿಯನ್ನರ ಮೇಲೆ ನಿರೀಕ್ಷೆ   

ಮೆಲ್ಬರ್ನ್‌(ಪಿಟಿಐ/ಐಎಎನ್ಎಸ್/ಎಎಫ್‌ಪಿ): ಆಸ್ಟ್ರೇಲಿಯಾದ  ಕ್ರೀಡಾ ಪ್ರೇಮಿಗಳಿಗೆ ಈಗ ‘ಹಬ್ಬ’ಗಳ ಸುಗ್ಗಿ. ಒಂದೆಡೆ ಭಾರತ ಎದುರಿನ ಕ್ರಿಕೆಟ್‌ ಸರಣಿ. ಮತ್ತೊಂದಡೆ ಸೋಮವಾರ ಆರಂಭವಾಗುವ ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ.

ಹೀಗಾಗಿ ಬಹುತೇಕ ಕ್ರೀಡಾ ಪ್ರೇಮಿಗಳ ಚಿತ್ತ ಕಾಂಗರೂಗಳ ನಾಡಿನತ್ತ ನೆಟ್ಟಿದೆ.  ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್‌ ಮತ್ತು ಸೆರೆನಾ ವಿಲಿಯಮ್ಸ್ ಅವರಿಗೆ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಅಮೆರಿಕದ ಸೆರೆನಾ ಮತ್ತು ಸರ್ಬಿಯಾದ ನೊವಾಕ್‌ ಅವರು ಹೋದ ವರ್ಷ ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ನೊವಾಕ್‌ ಅವರು ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಐದು ಬಾರಿ ಚಾಂಪಿಯನ್‌ ಆಗಿದ್ದಾರೆ.

ಹೋದ ವರ್ಷದ ಫೈನಲ್‌ನಲ್ಲಿ ನೊವಾಕ್‌ ಬ್ರಿಟನ್‌ನ ಆ್ಯಂಡಿ ಮರ್ರೆ ಎದುರು ಗೆಲುವು ಸಾಧಿಸಿದ್ದರು.  ಅವರು 2014ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಟಾನಿಸ್ಲಾಸ್‌ ವಾವ್ರಿಂಕ ಎದುರು ಸೋತಿದ್ದರು. ಇದರ ಜೊತೆಗೆ ಇಲ್ಲಿರುವ ಭಾರಿ ಬಿಸಿಲು ಆಟಗಾರರ ಸಾಮರ್ಥ್ಯಕ್ಕೆ ಸವಾಲೊಡ್ಡುವುದು ಖಚಿತ.

‘ಸತತ ಪಂದ್ಯಗಳಲ್ಲಿ ಗೆಲುವು ಪಡೆಯುತ್ತಿದ್ದರೂ ಕೆಲ ಬಾರಿ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ.  ಬಿಸಿಲಿನ ತಾಪವನ್ನು ಎದುರಿಸಿ ಆಡುವುದು ಸುಲಭದ ಮಾತಲ್ಲ’ ಎಂದು ಜೊಕೊವಿಚ್‌ ಹೇಳಿದ್ದಾರೆ.

ಹಿಂದಿನ ಆರು ವರ್ಷಗಳಲ್ಲಿ ನಾಲ್ಕು ಬಾರಿ ಫೈನಲ್‌ ತಲುಪಿದ್ದ ಆ್ಯಂಡಿ ಮರ್ರೆ ಮೇಲೂ ಹೆಚ್ಚು ನಿರೀಕ್ಷೆಯಿದೆ.

‘ಟೆನಿಸ್‌ ಬಗ್ಗೆ ನನಗೆ ಅಪಾರ ಪ್ರೀತಿಯಿದೆ. ಆದರೆ ಕುಟುಂಬ ಹಾಗೂ ನನ್ನ ಮಕ್ಕಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಆ ನಂತರವಷ್ಟೇ ಆಟದ ಬಗ್ಗೆ ಯೋಚಿಸುತ್ತೇನೆ’ ಎಂದು ಎರಡನೇ ಶ್ರೇಯಾಂಕದ ಮರ್ರೆ ನುಡಿದರು.

ರಫೆಲ್‌ ನಡಾಲ್‌, ರೋಜರ್ ಫೆಡರರ್‌, ಸವಾಲನ್ನೂ ಮರ್ರೆ ಎದುರಿಸಬೇಕಿದೆ. ಉತ್ತಮ ಲಯದಲ್ಲಿರುವ ಸೆರೆನಾಗೂ ಈ ಬಾರಿ ಕಠಿಣ ಸವಾಲು ಎದುರಾಗಲಿದೆ. 34 ವರ್ಷದ ಸೆರೆನಾ ಇಲ್ಲಿ ಆರು ಬಾರಿ ಚಾಂಪಿಯನ್‌ ಆಗಿದ್ದಾರೆ.

ಭಾರತದ ಸವಾಲು: ಸತತ ಉತ್ತಮ ಪ್ರದರ್ಶನ ನೀಡುತ್ತಿರುವ ಸಾನಿಯಾ ಮಿರ್ಜಾ ಪ್ರಶಸ್ತಿ ಗೆಲ್ಲುವ ಭಾರತದ ಭರವಸೆ ಎನಿಸಿದ್ದಾರೆ.
ಮಾರ್ಟಿನಾ ಹಿಂಗಿಸ್‌ ಜೊತೆ ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಆಡಲಿದ್ದಾರೆ. ರೋಹನ್‌ ಬೋಪಣ್ಣ ಹಾಗೂ ಫ್ಲೋರಿನ್‌ ಮಾರ್ಗಿಯಾ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ.

ವಿಶ್ವರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸಾನಿಯಾ–ಮಾರ್ಟಿನಾ ಈ ವರ್ಷದಲ್ಲಿ ಬ್ರಿಸ್ಬೇನ್‌  ಮತ್ತು ಸಿಡ್ನಿ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಈ ಜೋಡಿ 2015ರಲ್ಲಿ ವಿಂಬಲ್ಡನ್‌ ಮತ್ತು ಅಮೆರಿಕ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿತ್ತು.  ಇವರು ಒಂದು ವರ್ಷದಿಂದ ಜೊತೆಯಾಗಿ ಆಡುತ್ತಿದ್ದಾರೆ. ಹನ್ನೊಂದು ಪ್ರಶಸ್ತಿಗಳನ್ನು ಜಯಿಸಿದ್ದಾರೆ.

ಭಾರತದ ಲಿಯಾಂಡರ್ ಪೇಸ್‌–ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರು ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಜುವಾನ್‌ ಸೆಬಾಸ್ಟಿಯನ್‌ ಕಾಬೆಲ್‌–ರಾಬೆರ್ಟ್‌ ಫರ್ಹಾ ಎದುರು ಆಡಲಿದ್ದಾರೆ. ಮಹೇಶ್‌ ಭೂಪತಿ ಹಾಗೂ ಗಿಲ್ಲೆಸ್ ಮುಲ್ಲರ್‌ ಕೂಡ ಕಣದಲ್ಲಿದ್ದಾರೆ.

ಬಹುಮಾನದ ವಿವರ ಕೋಟಿಗಳಲ್ಲಿ
₹22,84 ಸಿಂಗಲ್ಸ್‌ ವಿಭಾಗದ ವಿಜೇತರು
₹4.42 ಡಬಲ್ಸ್‌ ವಿಭಾಗದ ವಿಜೇತರು
₹1.2 ಮಿಶ್ರ ಡಬಲ್ಸ್‌ ವಿಭಾಗದ ವಿಜೇತರು

ಪುರುಷರ ವಿಭಾಗ
ನೊವಾಕ್‌ ಜೊಕೊವಿಚ್‌ (ಸರ್ಬಿಯಾ) ವಯಸ್ಸು: 28
ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಜೊಕೊವಿಚ್ ಹೋದ ವರ್ಷ ಇಲ್ಲಿ ಪ್ರಶಸ್ತಿ ಜಯಿಸಿದ್ದರು.  2008ರಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್‌ ಟ್ರೋಫಿ ಜಯಿಸಿದ್ದ ಈ ಆಟಗಾರ ಆಸ್ಟ್ರೇಲಿಯಾ ಓಪನ್‌ನಲ್ಲಿ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ.

ಆ್ಯಂಡಿ ಮರ್ರೆ (ಬ್ರಿಟನ್‌) ವಯಸ್ಸು: 28
ಇತ್ತೀಚಿಗೆ ನಡೆದ ಡೇವಿಸ್‌ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಬ್ರಿಟನ್‌ ತಂಡದಲ್ಲಿ ಮರ್ರೆ ಕೂಡ ಇದ್ದರು. ಆಸ್ಟ್ರೇಲಿಯಾ ಟೂರ್ನಿಯಲ್ಲಿ ನಾಲ್ಕು ಬಾರಿ ಫೈನಲ್‌ ತಲುಪಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ವಿಂಬಲ್ಡನ್‌ ಹಾಗೂ ಅಮೆರಿಕ ಓಪನ್‌ನಲ್ಲಿ ತಲಾ ಒಂದು ಬಾರಿ ಚಾಂಪಿಯನ್‌ ಆಗಿದ್ದರು.

ಸ್ಟಾನಿಸ್ಲಾಸ್ ವಾವ್ರಿಂಕ (ಸ್ವಿಟ್ಜರ್‌ಲೆಂಡ್‌) ವಯಸ್ಸು: 30
ಮೆಲ್ಬರ್ನ್‌ ಪಾರ್ಕ್‌ನಲ್ಲಿ 2014ರಲ್ಲಿ ಪ್ರಶಸ್ತಿ ಜಯಿಸಿದ್ದ ವಾವ್ರಿಂಕ ಉತ್ತಮ ಲಯದಲ್ಲಿದ್ದಾರೆ. ಹೋದ ವಾರ ಚೆನ್ನೈನಲ್ಲಿ ನಡೆದ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಚುರುಕಿನ ಸರ್ವ್‌ ಮಾಡುವುದು ಈ ಆಟಗಾರನ ಪ್ರಮುಖ ಸಕಾರಾತ್ಮಕ ಅಂಶ.

ADVERTISEMENT

ರಫೆಲ್‌ ನಡಾಲ್‌ (ಸ್ಪೇನ್‌) ವಯಸ್ಸು: 29
ಆಸ್ಟ್ರೇಲಿಯಾ ಓಪನ್‌ನಲ್ಲಿ ನಡಾಲ್‌ 2009ರಲ್ಲಿ ಮಾತ್ರ ಪ್ರಶಸ್ತಿ ಜಯಿಸಿದ್ದಾರೆ. ಹೋದ ವರ್ಷ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದ್ದರು. ಈಗಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿದ್ದಾರೆ.  2008ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಪ್ರಮುಖ ಆಟಗಾರ್ತಿಯರ ಸಾಧನೆಯ ವಿವರ
ಸೆರೆನಾ ವಿಲಿಯಮ್ಸ್  (ಅಮೆರಿಕ)  ವಯಸ್ಸು: 34

ಮೊಣಕಾಲು ನೋವಿನಿಂದ ಇತ್ತೀಚಿಗಷ್ಟೇ ಚೇತರಿಸಿಕೊಂಡಿರುವ ಸೆರೆನಾ ವಿಲಿಯಮ್ಸ್‌ ಈ ಟೂರ್ನಿಯ ಹಾಲಿ ಚಾಂಪಿಯನ್‌. 2002ರಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಒಟ್ಟು 21 ಟ್ರೋಫಿಗಳು ಇವರ ಮಡಿಲು ಸೇರಿವೆ. ಮೆಲ್ಬರ್ನ್ ಪಾರ್ಕ್‌ನಲ್ಲಿ ಆರು ಬಾರಿ ಚಾಂಪಿಯನ್‌ ಆಗಿದ್ದಾರೆ.

ಸಿಮೊನಾ ಹಲೆಪ್‌ (ರುಮೇನಿಯಾ ) ವಯಸ್ಸು: 24
ಚೊಚ್ಚಲ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣು ಇಟ್ಟಿರುವ ಸಿಮೊನಾ ಇತ್ತೀಚಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2014 ಹಾಗೂ 2015ರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ತಲುಪಿದ್ದರು. ಎರಡು ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಗಳಿಸಿದ್ದರು.

ಗಾರ್ಬೈನ್‌ ಮುಗುರುಜಾ (ಸ್ಪೇನ್‌) ವಯಸ್ಸು: 22
ಹೋದ ವರ್ಷದ ವಿಂಬಲ್ಡನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದ ಮುಗುರುಜಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಹಿಂದಿನ ಸತತ ಎರಡು ವರ್ಷ ನಾಲ್ಕನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು. 2015ರ ಕೆಲ ಉತ್ತಮ ಗೆಲುವುಗಳನ್ನು ಪಡೆದಿರುವ ಕಾರಣ ಈ ಆಟಗಾರ್ತಿಯ ಮೇಲೆ ಹೆಚ್ಚು ನಿರೀಕ್ಷೆಯಿದೆ.

ಮರಿಯಾ ಶರಪೋವಾ (ರಷ್ಯಾ) ವಯಸ್ಸು:28
ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಶರಪೋವಾ ಇಲ್ಲಿ 2008ರ ಬಳಿಕ ಒಮ್ಮೆಯೂ ಚಾಂಪಿಯನ್‌ ಆಗಿಲ್ಲ. ಇವರು 2014ರಲ್ಲಿ ಕೊನೆಯ ಗ್ರ್ಯಾಂಡ್ ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದರು. ಫ್ರೆಂಚ್‌ ಓಪನ್‌ನಲ್ಲಿ ಎರಡು, ವಿಂಬಲ್ಡನ್‌ ಹಾಗೂ ಅಮೆರಿಕ ಓಪನ್‌ನಲ್ಲಿ ತಲಾ ಒಂದು ಸಲ ಚಾಂಪಿಯನ್‌ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.