ADVERTISEMENT

ಹಿಂಸಾಚಾರ ಪಂದ್ಯಕ್ಕೆ ಅಡ್ಡಿಯಾಗದು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2011, 19:30 IST
Last Updated 9 ಆಗಸ್ಟ್ 2011, 19:30 IST
ಹಿಂಸಾಚಾರ ಪಂದ್ಯಕ್ಕೆ ಅಡ್ಡಿಯಾಗದು
ಹಿಂಸಾಚಾರ ಪಂದ್ಯಕ್ಕೆ ಅಡ್ಡಿಯಾಗದು   

ಬರ್ಮಿಂಗ್‌ಹ್ಯಾಮ್: ಹಿಂಸಾಚಾರ ಘಟನೆಯ ನಂತರ ಭಯದ ವಾತಾವರಣ ನಿರ್ಮಾಣವಾಗಿದ್ದರೂ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ನಿಗದಿಯಂತೆ ನಡೆಯುತ್ತದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಲಂಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಆದರೂ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ಯಾವುದೇ ಯೋಚನೆಯನ್ನು ಇಸಿಬಿ ಹೊಂದಿಲ್ಲ. ಕ್ರಿಕೆಟ್ ಆಟಗಾರರಿಗೆ, ಅಧಿಕಾರಿಗಳಿಗೆ ಹಾಗೂ ಪ್ರೇಕ್ಷಕರಿಗೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ. ನಿರಾತಂಕವಾಗಿ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬರಬಹುದೆಂದು ಇಸಿಬಿ ಸಂಪರ್ಕ ವಿಭಾಗದ ಮುಖ್ಯಸ್ಥ ಸ್ಟೀವ್ ಎಲ್ವರ್ತ್ ತಿಳಿಸಿದ್ದಾರೆ.

`ಬುಧವಾರ ಆರಂಭವಾಗಲಿರುವ ಪಂದ್ಯಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆಯ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದೇವೆ~ ಎಂದು ಸ್ಟೀವ್ ಮಂಗಳವಾರ ಪ್ರಕಟಿಸಿದ್ದಾರೆ.

ಕ್ರಿಸ್ ಟ್ರೆಮ್ಲೆಟ್ ಅಲಭ್ಯ: 
ಬೆನ್ನು ನೋವಿನಿಂದ ಬಳಲುತ್ತಿರುವ ಇಂಗ್ಲೆಂಡ್ ವೇಗಿ ಕ್ರಿಸ್ ಟ್ರೆಮ್ಲೆಟ್ ಅವರು ಎಜ್‌ಬಾಸ್ಟನ್‌ನಲ್ಲಿ ಬುಧವಾರ ಆರಂಭವಾಗಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ಗೆ ಲಭ್ಯವಿಲ್ಲ.
`ಟ್ರೆಮ್ಲೆಟ್ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನಾಲ್ಕನೇ ಟೆಸ್ಟ್ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು~ ಎಂದು ಇಸಿಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.