ADVERTISEMENT

`ಹಿರಿಯಜ್ಜ' ನಿವೃತ್ತಿ

ಓಟ ನಿಲ್ಲಿಸಿದ 101 ವರ್ಷ ವಯಸ್ಸಿನ ಫೌಜಾ ಸಿಂಗ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 19:59 IST
Last Updated 24 ಫೆಬ್ರುವರಿ 2013, 19:59 IST
ಹಾಂಕಾಂಗ್ ಮ್ಯಾರಥಾನ್ ವೇಳೆ ನಡೆದ 10 ಕಿ.ಮೀ. ಓಟದ ಸ್ಪರ್ಧೆ ಪೂರೈಸಿದ ಫೌಜಾ ಸಿಂಗ್ ನೆರೆದ ಪ್ರೇಕ್ಷಕರತ್ತ ಕೈಬೀಸಿದ ಕ್ಷಣ 	-ಎಎಫ್‌ಪಿ ಚಿತ್ರ
ಹಾಂಕಾಂಗ್ ಮ್ಯಾರಥಾನ್ ವೇಳೆ ನಡೆದ 10 ಕಿ.ಮೀ. ಓಟದ ಸ್ಪರ್ಧೆ ಪೂರೈಸಿದ ಫೌಜಾ ಸಿಂಗ್ ನೆರೆದ ಪ್ರೇಕ್ಷಕರತ್ತ ಕೈಬೀಸಿದ ಕ್ಷಣ -ಎಎಫ್‌ಪಿ ಚಿತ್ರ   

ಹಾಂಕಾಂಗ್ (ಪಿಟಿಐ): ದೀರ್ಘ ದೂರದ ಓಟಗಾರ ಭಾರತದ ಮೂಲದ `ಹಿರಿಯಜ್ಜ' ಫೌಜಾ ಸಿಂಗ್ ತಮ್ಮ ಓಟಕ್ಕೆ ನಿವೃತ್ತಿ ಪ್ರಕಟಿಸಿದ್ದಾರೆ.

101 ವರ್ಷ ವಯಸ್ಸಿನ ಫೌಜಾ ಹಾಂಕಾಂಗ್‌ನಲ್ಲಿ ನಡೆದ 10 ಕಿ.ಮೀ. ಓಟದಲ್ಲಿ ಒಂದು ಗಂಟೆ 32 ನಿಮಿಷ 28 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ತಮ್ಮ ಓಟದ ಜೀವನಕ್ಕೆ ವಿದಾಯ ಹೇಳಿದರು. `ಓಡುತ್ತಿರುವಾಗ ಸದಾ ಖುಷಿಯಿಂದಿರುತ್ತೇನೆ. ಆದರೆ, ಇವತ್ತು ನನ್ನ ಓಟವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ. ಈ ಓಟ ತುಂಬಾ ಖುಷಿ ನೀಡಿದೆ' ಎಂದು `ಟರ್ಬನ್ಡ್ ಟೊರ್ನಾಡೊ' ಖ್ಯಾತಿಯ ಫೌಜಾ ಹೇಳಿದರು.

ಬ್ರಿಟನ್‌ನಲ್ಲಿ ನೆಲೆಸಿರುವ ಈ ಅಜ್ಜ ಏಪ್ರಿಲ್ ಒಂದಕ್ಕೆ 102ನೇ ವರ್ಷಕ್ಕೆ ಕಾಲಿಡಲಿದ್ದಾರೆ. 2011 ರಲ್ಲಿ ಟೊರಾಂಟೊದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅವರು ಇಂತಹ ಸಾಧನೆ ಮಾಡಿದ ಅತ್ಯಂಹ ಹಿರಿಯ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ, ಅವರ ಈ ಸಾಧನೆ ಗಿನ್ನೆಸ್ ದಾಖಲೆಯಲ್ಲಿ ಸ್ಥಾನ ಪಡೆದಿಲ್ಲ. ಏಕೆಂದರೆ, ಫೌಜಾ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳಿಲ್ಲ.

ಲಂಡನ್, ಟೊರಾಂಟೊ ಹಾಗೂ ನ್ಯೂಯಾರ್ಕ್‌ಗಳಲ್ಲಿ ನಡೆದ ಒಂಬತ್ತು ಮ್ಯಾರಾಥಾನ್ ಸ್ಪರ್ಧೆಗಳಲ್ಲಿ ಇವರು ಪಾಲ್ಗೊಂಡಿದ್ದರು. ಟೊರಾಂಟೊದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಐದು ಗಂಟೆ 40 ನಿಮಿಷ ನಾಲ್ಕು ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಇದು ಶತಾಯುಷಿಯ ಅತ್ಯುತ್ತಮ ಸಾಧನೆಯಾಗಿದೆ. 2012ರ ಲಂಡನ್ ಒಲಿಂಪಿಕ್ಸ್‌ನ ವೇಳೆ ಜ್ಯೋತಿ ಹಿಡಿಯುವ ಅವಕಾಶ ಈ ಅಜ್ಜನಿಗೆ ಲಭಿಸಿತ್ತು.

1999ರಲ್ಲಿ ತನ್ನ 89ರ ಹರೆಯದಲ್ಲಿ ಫೌಜಾ ಚಾರಿಟಿಯ ಉದ್ದೇಶದಿಂದ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು. `ಓಟದಿಂದ ಸಾಕಷ್ಟು ಲಾಭವಾಗಿದೆ. ಇದರಿಂದ ದೈಹಿಕವಾಗಿ ಸಣ್ಣ ಕಾಯಿಲೆಯೂ ಬಂದಿಲ್ಲ. ಈ ದಿನವನ್ನೂ ಎಂದಿಗೂ ಮರೆಯುವುದಿಲ್ಲ' ಎಂದು ಸ್ಪರ್ಧೆಯ ಆರಂಭಕ್ಕೆ ಮುನ್ನ ಫೌಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.