ADVERTISEMENT

ಹುಬ್ಬಳ್ಳಿ: 9ರಿಂದ ಅಂತರರಾಜ್ಯ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಹುಬ್ಬಳ್ಳಿ: ನಗರದ ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಫೆ 9ರಿಂದ 12ರವರೆಗೆ ಸೆಟ್ಲ್‌ಮೆಂಟ್ ಮೈದಾನದಲ್ಲಿ ಅಂತರರಾಜ್ಯ ಮಟ್ಟದ ಆಹ್ವಾನಿತ ಹಾಕಿ ಟೂರ್ನಿಯನ್ನು ಏರ್ಪಡಿಸಲಾಗಿದೆ.

ಪುಣೆಯ ಪಿಳ್ಳೈ ಅಕಾಡೆಮಿ, ಕೊಲ್ಲಾಪುರದ ಎಂಕೆಎಂ, ಹುಬ್ಬಳ್ಳಿಯ ವಾಸು ಇಲೆವನ್, ಮೈಸೂರು, ಕೋಲಾರ, ಬಾಗಲಕೋಟೆ ಮತ್ತು ವಿಜಾಪುರ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ವಿಜೇತ ತಂಡಗಳಿಗೆ ಪ್ರಥಮ 12 ಸಾವಿರ, ದ್ವಿತೀಯ ಎಂಟು ಸಾವಿರ, ತೃತೀಯ ನಾಲ್ಕು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ  ನೀಡಲಾಗುತ್ತದೆ.

ಸೆಟ್ಲ್‌ಮೆಂಟ್ ಹಾಕಿ ಮೈದಾನವನ್ನು ಯಂಗ್ ಸ್ಟಾರ್ಸ್‌ ಸ್ಪೋರ್ಟ್ಸ್ ಕ್ಲಬ್‌ನಿಂದ ರೂ 50 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ಜಿಲ್ಲಾಧಿಕಾರಿ ದರ್ಪಣ್ ಜೈನ್ ಫೆ. 9ರಂದು ಬೆಳಿಗ್ಗೆ 11ಕ್ಕೆ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಯಮನೂರ ಗುಡಿಹಾಳ ಮತ್ತು ಕಾರ್ಯದರ್ಶಿ ಚಂದ್ರಶೇಖರ ಗೋಕಾಕ್ ಟೂರ್ನಿಯ ಮಾಹಿತಿ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.