ADVERTISEMENT

‘ಮಾಹಿತಿ ಬಹಿರಂಗ ಮಾಡುತ್ತಿದ್ದ ಮೇಯಪ್ಪನ್‌’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:53 IST
Last Updated 25 ನವೆಂಬರ್ 2014, 19:53 IST

ನವದೆಹಲಿ: ‘ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್‌ ಫಿಕ್ಸಿಂಗ್‌ ಹಗರಣ­ದಲ್ಲಿ ಎನ್‌. ಶ್ರೀನಿವಾಸನ್‌ ಅವರ ಅಳಿಯ ಗುರುನಾಥ್‌ ಮೇಯಪ್ಪನ್‌ ‘ಒಳ ವ್ಯವಹಾರ’ಗಳ ಪಾತ್ರ ನಿರ್ವಹಿ­ಸಿದಂತೆ ತೋರುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

‘ಮೇಯಪ್ಪನ್‌ ನೀಡುತ್ತಿದ್ದ ಮಾಹಿತಿ ಆಧರಿಸಿ ಮತ್ತೊಬ್ಬರು ಬೆಟ್ಟಿಂಗ್‌ ನಡೆಸುತ್ತಿದ್ದರು ಎಂದಾದರೆ ಅದು ‘ಒಳ ವ್ಯವಹಾರ’ ಎನಿಸಿ­ಕೊಳ್ಳುತ್ತದೆ’ ಎಂದು ನ್ಯಾಯಮೂರ್ತಿ­ಗಳಾದ ಟಿ.ಎಸ್‌. ಠಾಕೂರ್‌ ಮತ್ತು ಕಲೀಫುಲ್ಲಾ ಅವರ ಪೀಠ ಅಭಿಪ್ರಾಯ ಪಟ್ಟಿದೆ.

ಐಪಿಎಲ್‌ ಬೆಟ್ಟಿಂಗ್‌ ಮತ್ತು ಸ್ಪಾಟ್ ಫಿಕ್ಸಿಂಗ್‌ ಹಗರಣದಲ್ಲಿ ಮೇಯಪ್ಪನ್‌ ಪಾತ್ರ ಇದೆ ಎಂದು ಮುದ್ಗಲ್‌ ಸಮಿತಿ ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ತಿಳಿಸಿದೆ.

‘ಮೇಯಪ್ಪನ್‌ ಅವರು ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಭಾಗವಾಗಿ­ದ್ದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಅವರು ತಂಡದ ಜೊತೆಯೇ ಇರುತ್ತಿ­ದ್ದರು. ತಂಡದ ಒಳ ಯೋಜನೆಗಳು ಮೇಯಪ್ಪನ್‌ ಅವರಿಗೆ ಗೊತ್ತಿರುತ್ತಿದ್ದವು’ ಎಂದು ಸುಮಾರು ಎರಡು ಗಂಟೆ ಕಾಲದ ನಡೆದ ವಿಚಾರಣೆಯ ವೇಳೆ ಬಿಹಾರ ಕ್ರಿಕೆಟ್‌ ಸಂಸ್ಥೆ ಪರ ವಕೀಲ  ಹರೀಶ್ ಸಾಳ್ವೆ ಅವರು ಕೋರ್ಟ್‌ಗೆ ತಿಳಿಸಿದರು.

ಶ್ರೀನಿವಾಸನ್‌ ಹೆಸರಿಲ್ಲ: ಶ್ರೀನಿವಾಸನ್‌ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದ ಕೋರ್ಟ್‌, ‘ಶ್ರೀನಿ­ವಾಸನ್ ಅವರು ಸ್ಪಾಟ್‌ ಫಿಕ್ಸಿಂಗ್‌ ಇಲ್ಲವೇ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಮುದ್ಗಲ್‌ ವರದಿ ಎಲ್ಲೂ ಖಚಿತವಾಗಿ ಹೇಳಿಲ್ಲ’ ಎಂದಿದೆ. ಆದರೆ, ಶ್ರೀನಿವಾಸನ್‌ ಅವರಿಗೆ ನಿಕಟವಾಗಿದ್ದವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದೂ ತಿಳಿಸಿದೆ.

ADVERTISEMENT

ಬಹಿರಂಗ ಮಾಡಿ: ‘ಮುದ್ಗಲ್‌ ವರದಿಯಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಆದ್ದರಿಂದ ವರದಿ ಬಹಿರಂಗ ಮಾಡಬೇಕು’
ಎಂದು ಬಿಹಾರ ಕ್ರಿಕೆಟ್‌ ಸಂಸ್ಥೆ

ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಈ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್‌ ಒಪ್ಪಿಕೊಂಡಿದೆ. ಆದರೆ, ಇದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಗುರು­ವಾರಕ್ಕೆ (ನ.27) ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.