ADVERTISEMENT

15 ವರ್ಷದೊಳಗಿನ ಬಾಲಕಿಯರ ವಿಭಾಗ;ಚೆಸ್: ಗಂಗಮ್ಮ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಮಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿ ಬಿ.ಎನ್.ಗಂಗಮ್ಮ (ಮೈಸೂರು), ನಗರದ ಕೊಡಿಯಾಲಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ಗುರುವಾರ ಮುಕ್ತಾಯಗೊಂಡ ರಾಜ್ಯ 15 ವರ್ಷದೊಳಗಿನ ಬಾಲಕಿಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಳು.

ಗಂಗಮ್ಮ ನಾಲ್ಕು ಸುತ್ತುಗಳಿಂದ 3.5 ಅಂಕ ಸಂಗ್ರಹಿಸಿದಳು. ಮಂಗಳೂರಿನ ಶಾಲೊನ್ ಜೋನ್ ಪಾಯಸ್ ಮತ್ತು ಮೈಸೂರಿನ ಎಚ್.ಆರ್.ಮಾನಸಾ ತಲಾ ಮೂರು ಪಾಯಿಂಟ್ಸ್ ಸಂಗ್ರಹಿಸಿದರೂ, ಟೈಬ್ರೇಕ್ ಅಂಕಗಳ ಆಧಾರದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಮೂರನೇ ಸುತ್ತಿನಲ್ಲಿ ಮೈಸೂರಿನವರೇ ಆದ ಮಾನಸಾ ವಿರುದ್ಧ ಜಯಗಳಿಸಿದ ಗಂಗಮ್ಮ, ಅಂತಿಮ ಸುತ್ತಿನಲ್ಲಿ ಶಾಲೊನ್ ವಿರುದ್ಧ ಡ್ರಾ ಮಾಡಿಕೊಂಡಳು. ಹುಬ್ಬಳ್ಳಿಯ ವಾಣಿ ಎಸ್.ಇಂದ್ರಾಳಿ (2.5), ಮಾನಸಾ ಎದುರು ಸೋಲನುಭವಿಸಿದಳು. ಯೋಗಿತಾ ನಾಯಕ್ (2.5) ಮತ್ತು ಸ್ವಾತಿ ಭಟ್ (2.5) ನಡುವಣ ಪಂದ್ಯ ಡ್ರಾ ಆಯಿತು. ವಾಣಿ ಇಂದ್ರಾಳಿ ನಾಲ್ಕನೇ ಸ್ಥಾನ ಪಡೆದರು. 11 ಆಟಗಾರ್ತಿಯರು ಭಾಗವಹಿಸಿದ್ದರು.

ಮುನ್ನಡೆಯಲ್ಲಿ ಇಬ್ಬರು: ಎರಡನೇ ಶ್ರೇಯಾಂಕದ ಎಂ.ಸಾತ್ವಿಕ್ ಮತ್ತು ಮಂಗಳೂರಿನ ಆಂಡ್ರಿಯಾ ಡಿಸೋಜ ಗರಿಷ್ಠ  ನಾಲ್ಕು ಅಂಕಗಳೊಡನೆ ರಾಜ್ಯ 15 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನ ನಂತರ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಬಾಲಕರ ವಿಭಾಗ 9 ಸುತ್ತುಗಳನ್ನು ಹೊಂದಿದೆ. ನಾಲ್ಕನೇ ಸುತ್ತಿನ ಮೊದಲ ಬೋರ್ಡ್‌ನಲ್ಲಿ ಮಂಗಳೂರಿನ ಶರಣ್ ರಾವ್ (3), ಬೆಂಗಳೂರಿನ ಸಾತ್ವಿಕ್‌ಗೆ ಶರಣಾದ. ಅಗ್ರ ಶ್ರೇಯಾಂಕದ ಕೊಡಗಿನ ಆಟಗಾರ ಎ.ಆಗಸ್ಟಿನ್ (2.5) ವೈಫಲ್ಯ ಮುಂದುವರಿದಿದ್ದು, ಎರಡನೇ ಬೋರ್ಡ್‌ನಲ್ಲಿ ಮಂಗಳೂರಿನ ಬಾಲಕಿ ಆಂಡ್ರಿಯಾ ಡಿಸೋಜ ಎದುರು ಸೋಲನುಭವಿಸಿದ.

ಮೈಸೂರಿನ ಅಮೋಘ ಎಚ್.ಎ. (2.5) ಮತ್ತು ಮಂಗಳೂರಿನ ವಿವೇಕರಾಜ್ (2.5) ಪಾಯಿಂಟ್ ಹಂಚಿಕೊಳ್ಳಲು ನಿರ್ಧರಿಸಿದರು. ಬೆಂಗಳೂರಿನ ಪಾರ್ಥಸಾರಥಿ  (2.5) ಮತ್ತು ಮಂಗಳೂರಿನ ನಿಖಿಲೇಶ್ ಹೊಳ್ಳ (2.5) ಕೂಡ ಡ್ರಾ ಒಪ್ಪಂದಕ್ಕೆ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.