ADVERTISEMENT

2012ರ ಒಲಿಂಪಿಕ್ಸ್ ಇನ್ನು 44 ದಿನ...

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST
2012ರ ಒಲಿಂಪಿಕ್ಸ್ ಇನ್ನು 44 ದಿನ...
2012ರ ಒಲಿಂಪಿಕ್ಸ್ ಇನ್ನು 44 ದಿನ...   

ಇತಿಹಾಸದ ಪುಟಗಳಿಂದ
ಪ್ಯಾರಿಸ್ ನಗರದಲ್ಲಿ 1900ರಲ್ಲಿ ನಡೆದಿದ್ದ ಎರಡನೇ ಒಲಿಂಪಿಕ್ಸ್ ಹಲವು ಕಾರಣಗಳಿಂದ ಬಹಳ ಮಹತ್ವದ್ದಾಗಿದೆ. ಆ ಕೂಟದಲ್ಲಿ ಹಲವು ಕ್ರೀಡೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿತ್ತು. ಈಕೆಸ್ಟ್ರೀಯನ್, ಗಾಲ್ಫ್, ಪೋಲೊ, ಬಿಲ್ಲುಗಾರಿಕೆ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿತ್ತು.

ವಿಶ್ವ ವಾಣಿಜ್ಯ ಮೇಳದ ಜತೆಯಲ್ಲಿಯೇ ಈ ಕೂಟವನ್ನೂ ಸಂಘಟಿಸಿದ್ದರಿಂದ ಗಾಳಿಪಟ ಹಾರಿಸುವುದು ಸೇರಿದಂತೆ ಕೆಲವು ಅನಧಿಕೃತ ಕ್ರೀಡೆಗಳಲ್ಲಿಯೂ ಸ್ಪರ್ಧೆಗಳು ನಡೆದವು. ಅವುಗಳ ಕುರಿತ ಅಂಕಿ ಅಂಶಗಳನ್ನು ನಂತರ ಗಂಭೀರವಾಗಿ ಪರಿಗಣಿಸಲಿಲ್ಲ.

ಅಥ್ಲೆಟಿಕ್ಸ್‌ನಲ್ಲಿ ಅಮೆರಿಕ ತಂಡವೇ ಮೇಲುಗೈ ಸಾಧಿಸಿತ್ತು. ಈ ವಿಭಾಗದ 21 ಪದಕಗಳಲ್ಲಿ 13 ಪದಕಗಳನ್ನು ಅಮೆರಿಕದ ಕ್ರೀಡಾಪಟುಗಳೇ ಗಳಿಸಿದ್ದರು. ಅಮೆರಿಕಾದ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಕ್ಲಬ್‌ಗಳ ತಂಡಗಳ ಆಯ್ದ ಅಥ್ಲೀಟ್‌ಗಳ ತಂಡ ಇದರಲ್ಲಿ ಸ್ಪರ್ಧಿಸಿತ್ತು. ಒಲಿಂಪಿಕ್ಸ್ ಚರಿತ್ರೆಯಲ್ಲಿ ಈ ಕೂಟದಲ್ಲಿ ಮಾತ್ರ ಕ್ರಿಕೆಟ್  ಪಂದ್ಯಗಳು ನಡೆದಿದ್ದು.

ಈ ಕೂಟದಲ್ಲಿ ಸುಮಾರು ಒಂದು ಸಾವಿರ ಸ್ಪರ್ಧಿಗಳು 19 ಕ್ರೀಡೆಗಳಲ್ಲಿ ಸೆಣಸಾಟ ನಡೆಸಿದ್ದರು.
ಭಾರತವು ಈ ಒಲಿಂಪಿಕ್ಸ್‌ನಲ್ಲಿ ಬ್ರಿಟನ್‌ನ ಯೂನಿಯನ್ ಜಾಕ್ ಧ್ವಜದ ಅಡಿಯಲ್ಲಿ ಸ್ಪರ್ಧಿಸಿತ್ತು. ಭಾರತ ತಂಡವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎಂಬುವವರು ಎರಡು ಬೆಳ್ಳಿಯ ಪದಕಗಳನ್ನು ಗೆದ್ದಿದ್ದರು. ಇವರು 200ಮೀ. ಓಟವನ್ನು 22.8 ಸೆಕೆಂಡುಗಳಲ್ಲಿ ಕ್ರಮಿಸಿ ಎರಡನೇಯವರಾಗಿ ಗುರಿ ಮುಟ್ಟಿದ್ದರೆ, 200ಮೀ. ಹರ್ಡಲ್ಸ್‌ನಲ್ಲಿ 26.6 ಸೆಕೆಂಡುಗಳಲ್ಲಿ ಓಡಿ ಎರಡನೇಯವರಾಗಿ ಗುರಿ ಸೇರಿದ್ದರು.

ಕೆ.ಡಿ.ಜಾಧವ್

ಸ್ವತಂತ್ರ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ  ಮೊದಲ ಪದಕವನ್ನು ಕುಸ್ತಿಯಲ್ಲಿ ಗಳಿಸಿದೆ. ಮಹಾರಾಷ್ಟ್ರದ ಕೆ.ಡಿ.ಜಾಧವ್ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆ.ಡಿ.ಜಾಧವ್ (1926-1984) ತಮ್ಮ ಹುಟ್ಟೂರಿನಲ್ಲಿ ಕುಸ್ತಿಯನ್ನು ನೋಡುತ್ತಾ, ಆಡುತ್ತಾ ಬೆಳೆದವರು.
 
ಸ್ವತಃ ಪೈಲ್ವಾನರಾಗಿದ್ದ ಇವರ ತಂದೆ ದಾದಾಸಾಹೇಬ್ ಅವರೇ ಇವರಿಗೆ ಮೊದಲ ಗುರು. ನಂತರದ ದಿನಗಳಲ್ಲಿ ಇವರ ಸಾಮರ್ಥ್ಯವನ್ನು ಗುರುತಿಸಿದ ರೀಸ್ ಗಾರ್ಡನರ್ ಎಂಬುವವರು ವಿಶೇಷ ತರಬೇತಿ ನೀಡಿದರು. ಹೀಗಾಗಿ ಜಾಧವ್ ಆಗ ದೇಶದ ವಿವಿಧ ಕಡೆ ನಡೆಯುತ್ತಿದ್ದ ಕುಸ್ತಿ ಟೂರ್ನಿಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

ಇವರು ಕುಸ್ತಿಯಷ್ಟೇ ಅಲ್ಲ ಕಬಡ್ಡಿ, ಈಜು, ವೇಟ್‌ಲಿಫ್ಟಿಂಗ್, ಹ್ಯಾಮರ್ ಥ್ರೋ ಗಳಲ್ಲಿಯೂ ಸಾಕಷ್ಟು ನೈಪುಣ್ಯತೆ ಸಾಧಿಸಿದ್ದರು. ಹೀಗೆ ವಿಭಿನ್ನ ಕ್ರೀಡೆಗಳಲ್ಲಿನ ಪರಿಶ್ರಮದಿಂದಾಗಿ ಇವರು ಕುಸ್ತಿಯಲ್ಲಿ ಇನ್ನಷ್ಟೂ ಸಹಿಷ್ಣುತೆ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. 1948ರಲ್ಲಿ ಲಂಡನ್ ಒಲಿಂಪಿಕ್ಸ್‌ಗೆ ತೆರಳಿದ್ದ ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿದ್ದರು.

ಲಂಡನ್‌ನಲ್ಲಿ ಫ್ಲೈವೇಟ್ ವಿಭಾಗದಲ್ಲಿ ಪೈಪೋಟಿ ನಡೆಸಿದರಾದರೂ, ಆರನೇ ಸ್ಥಾನಕ್ಕಿಳಿಯಬೇಕಾಯಿತು. ಅಲ್ಲಿ ಇವರ ವಿಭಾಗದಲ್ಲಿ ಒಟ್ಟು 42 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ನಾಡಿಯ ಕೊಮನೆಸಿ

ಜಿಮ್ನಾಸ್ಟಿಕ್ಸ್ ಲೋಕದಲ್ಲಿ ನಾಡಿಯ ಎಲೆನಾ ಕೊಮನೆಸಿ ಹೆಸರು ಕೇಳದವರು ಅಪರೂಪ. ರುಮೇನಿಯಾದ ಇವರು ಪುಟ್ಟ ವಯಸ್ಸಿನಲ್ಲೇ ಜಿಮ್ನಾಸ್ಟಿಕ್ಸ್ ಕಸರತ್ತಿನಲ್ಲಿ ವಿಶೇಷ ತರಬೇತಿ ಪಡೆದು ಏರಿದ ಎತ್ತರ ಅನನ್ಯ. 1961ರಲ್ಲಿ ಜನಿಸಿದ ಇವರು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ನಲ್ಲಿ ತೋರಿದ ಸಾಧನೆ ಗಮನಾರ್ಹ.

 ಎಂಟು ವರ್ಷ ವಯಸ್ಸಾಗಿದ್ದಾಗ ರುಮೇನಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ತಾವು ಸ್ಪರ್ಧಿಸಿದ್ದ ವಿಭಾಗದಲ್ಲಿ 13ನೇ ಸ್ಥಾನ ಗಳಿಸಿದ್ದರು. 1975ರಲ್ಲಿ ನಾರ್ವೆಯಲ್ಲಿ ನಡೆದಿದ್ದ ಯೂರೊಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಇವರು ಫ್ಲೂರ್ ಎಕ್ಸರ್‌ಸೈಜ್‌ನಲ್ಲಿ ಬಂಗಾರದ ಸಾಧನೆ ತೋರಿದ್ದರು. ಆಗ ಇವರ ವಯಸ್ಸು ಕೇವಲ ಹದಿಮೂರು.

1976ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಆಲ್‌ರೌಂಡ್ ವಿಭಾಗ, ಅನ್‌ಈವನ್ ಸ್ಪರ್ಧೆ, ಬ್ಯಾಲೆನ್ಸ್ ಬೀಮ್ ಸ್ಪರ್ಧೆಗಳಲ್ಲಿ ಒಟ್ಟು ಮೂರು ಚಿನ್ನದ ಪದಕಗಳನ್ನು ಗೆದ್ದ ಇವರು ಇರುಳು ಕಳೆಯುವುದರೊಳಗೆ ಜಗತ್ತಿನಾದ್ಯಂತ ಪ್ರಖ್ಯಾತಿ ಗಳಿಸಿದ್ದರು. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಕೂಡಾ ಬ್ಯಾಲೆನ್ಸ್ ಬೀಮ್ ಮತ್ತು ಫ್ಲೂರ್ ಎಕ್ಸರ್‌ಸೈಜ್ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಈ ಚಿನ್ನಗಳಲ್ಲದೆ ಇವರು ಒಲಿಂಪಿಕ್ಸ್‌ನಲ್ಲಿ 3ರಜತ ಮತ್ತು ಒಂದು ಕಂಚಿನ ಪದಕವನ್ನೂ ಪಡೆದುಕೊಂಡಿದ್ದರು.

ಇದಲ್ಲದೆ ಇವರು ವಿಶ್ವಚಾಂಪಿಯನ್‌ಷಿಪ್‌ಗಳಲ್ಲಿಯೂ ಪಾಲ್ಗೊಂಡು 2 ಚಿನ್ನ ಮತ್ತು 2ರಜತ ಪದಕಗಳನ್ನು ಗೆದ್ದುಕೊಂಡಿದ್ದರು. ಎಪ್ಪತ್ತರ ದಶಕದಲ್ಲಿ ಯೂರೊಪಿಯನ್ ಚಾಂಪಿಯನ್‌ಷಿಪ್‌ಗಳಲ್ಲಿ ನಾಡಿಯ ಹೆಸರೇ ಎಲ್ಲೆಲ್ಲೂ ಕೇಳಿ ಬರುತಿತ್ತು. 1975ರಿಂದ 79ರವರೆಗೆ ಇವರು 9 ಚಿನ್ನದ ಪದಕ, 2ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿದ್ದರು.

ಈಜಿಪ್ಟ್

ADVERTISEMENT

ಈಜಿಪ್ಟ್ ತಂಡವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿ ಸರಿಯಾಗಿ ಒಂದು ಶತಮಾನ ಕಳೆದಿದೆ. 1912ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ಮೊದಲ ಬಾರಿಗೆ ಪಾಲ್ಗೊಂಡಿತ್ತು. ಅಲ್ಲಿಂದ ಈವರೆಗೆ ಈಜಿಪ್ಟ್ ಗಮನಾರ್ಹ ಸಾಮರ್ಥ್ಯವನ್ನಂತೂ ತೋರಿಲ್ಲ.

ಈಜಿಪ್ಟ್‌ನಲ್ಲಿ ಒಲಿಂಪಿಕ್ ಸಮಿತಿ 1910ರಲ್ಲಿ ಹುಟ್ಟು ಪಡೆದಿತ್ತು. ಸ್ಟಾಕ್‌ಹೋಮ್, ಅಂಟ್ ವರ್ಪ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಯಾವುದೇ ಪದಕ ಗೆಲ್ಲುವಲ್ಲಿ ಈಜಿಪ್ಟ್ ಯಶಸ್ಸು ಪಡೆದಿರಲಿಲ್ಲ. ಆಮ್‌ಸ್ಟರ್‌ಡಮ್‌ನಲ್ಲಿ 1928ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದುಕೊಂಡಿತ್ತು.

ಆಗ ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದುಕೊಂಡಿತ್ತು. ಡೈವಿಂಗ್‌ನಲ್ಲಿ ಕೂಡಾ ಈ ದೇಶಕ್ಕೆ ಎರಡು ಪದಕಗಳು ಬಂದಿದ್ದವು. 1936ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿಯೂ ಈಜಿಪ್ಟ್‌ನ ಕ್ರೀಡಾಪಟುಗಳು 2ಸ್ವರ್ಣ ಮತ್ತೊಂದು ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು.

ಲಂಡನ್‌ನಲ್ಲಿ 1948ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಒಂದು ಚಿನ್ನ ಮತ್ತೊಂದು ರಜತ ಪದಕವನ್ನು ಗೆದ್ದಿತ್ತು. ನಂತರದ ವರ್ಷಗಳಲ್ಲಿ ಆರಕ್ಕೇರದ ಮೂರಕ್ಕಿಳಿಯದ ಈಜಿಪ್ಟ್ 2004ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಬೀಜಿಂಗ್‌ನಲ್ಲಿ ಜೂಡೊದಲ್ಲಿ ಗಳಿಸಿದ ಒಂದು ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತ್ತು.
ಹೀಗೆ ಈ ದೇಶ ಒಲಿಂಪಿಕ್ಸ್‌ನಲ್ಲಿ 7ಚಿನ್ನವೂ ಸೇರಿದಂತೆ ಒಟ್ಟು 24 ಪದಕಗಳನ್ನು ತನ್ನ ಖಾತೆಯಲ್ಲಿಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.