ADVERTISEMENT

34ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ರಾಂಚಿ: ನಾಲ್ಕು ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ವಿವಿಧ ಕಾರಣಗಳಿಂದಾಗಿ ಹಲವು ಬಾರಿ ಮುಂದೂಡಲಾಗಿದ್ದ 34ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಶನಿವಾರ ರಾಂಚಿಯಲ್ಲಿ ವರ್ಣರಂಜಿತ ಚಾಲನೆ ಲಭಿಸಿತು.ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಕೆಲವೊಂದು ಗೊಂದಲ ಕಂಡುಬಂದರೂ ಬಳಿಕ ಗಾಯಕ ಸುಖ್ವಿಂದರ್ ಸಿಂಗ್,  ಬಾಲಿವುಡ್ ತಾರೆಯರಾದ ವಿವೇಕ್ ಒಬೆರಾಯ್ ಹಾಗೂ ಅಮಿಷಾ ಪಟೇಲ್ ತಮ್ಮ ಪ್ರದರ್ಶನದ ಮೂಲಕ ನೆರೆದವರನ್ನು ರಂಜಿಸಿದರು.

ಇಡೀ ದೇಶ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಗುಂಗಿನಲ್ಲಿದೆ. ಇದರ ನಡುವೆಯೇ ದೇಶದ ಅತಿದೊಡ್ಡ ಕೂಟಕ್ಕೆ ಚಾಲನೆ ಲಭಿಸಿದೆ. ಕಲಾವಿದರ ಪ್ರದರ್ಶನದ ಬಳಿಕ ನಡೆದ ಲೇಸರ್ ಶೋ ರಾಂಚಿಯ ಕ್ರೀಡಾ ಸಂಕೀರ್ಣದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತು. ಜಾರ್ಖಂಡ್ ರಾಜ್ಯಪಾಲ ಎಂಒ ಹಸನ್ ಫರೂಕ್ ಅವರು ಕೂಟವನ್ನು ಉದ್ಘಾಟಿಸಿದರು. ಈಜು ಸ್ಪರ್ಧಿ ರೋಹಿತ್ ಹವಾಲ್ದಾರ್ ಅವರು ಉದ್ಘಾಟನಾ ಸಮಾರಂಭದಲ್ಲಿ ಪಥಸಂಚಲನದ ವೇಳೆ ಕರ್ನಾಟಕ ತಂಡದ ಧ್ಜಜಧಾರಿಯಾಗಿದ್ದರು.

ಇನ್ನು ಫೆಬ್ರುವರಿ 26ರ ವರೆಗೆ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. 8,500 ಕ್ಕೂ ಅಧಿಕ ಸ್ಪರ್ಧಿಗಳು 33 ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿ ಹೋರಾಟ ನಡೆಸುವರು. ರಾಂಚಿ ಅಲ್ಲದೆ ಧನ್‌ಬಾದ್ ಮತ್ತು ಜಮ್ಶೆಡ್‌ಪುರದ ಕ್ರೀಡಾಂಗಣಗಳು ಕೂಟದ ಕೆಲವು ಸ್ಪರ್ಧೆಗಳಿಗೆ ಆತಿಥ್ಯ ವಹಿಸಲಿವೆ. ಅಥ್ಲೆಟಿಕ್ಸ್ ಒಳಗೊಂಡಂತೆ 33 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ತಲಾ 800 ಚಿನ್ನ ಮತ್ತು ಬೆಳ್ಳಿ ಹಾಗೂ 900 ಕಂಚಿನ ಪದಕಗಳನ್ನು ಪಣಕ್ಕಿಡಲಾಗಿದೆ. ಕಳೆದ ಬಾರಿಯ ಕೂಟದಲ್ಲಿ ಸರ್ವಿಸಸ್ 59 ಚಿನ್ನ, 46 ಬೆಳ್ಳಿ ಮತ್ತು 37 ಕಂಚುಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.