ADVERTISEMENT

ಆರ್‌ಸಿಬಿಯಲ್ಲಿ ಉಳಿದ ವಿರಾಟ್

ಪಿಟಿಐ
Published 4 ಜನವರಿ 2018, 18:59 IST
Last Updated 4 ಜನವರಿ 2018, 18:59 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 11ನೇ ಆವೃತ್ತಿಯಲ್ಲಿ ಫ್ರಾಂಚೈಸ್‌ಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆ ಬಿದ್ದಿತು.

ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್‌) ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಉಳಿಸಿಕೊಂಡಿವೆ. ಮಹೇಂದ್ರ ಸಿಂಗ್ ದೋನಿ ಮೂಲ ತಂಡಕ್ಕೆ ಮರಳಿದ್ದಾರೆ.

ಇಲ್ಲಿ ಗುರುವಾರ ನಡೆದ ಆಟಗಾರರನ್ನು ಉಳಿಸಿಕೊಳ್ಳುವ (ರಿಟೆನ್ಶನ್‌) ಪ್ರಕ್ರಿಯೆಯಲ್ಲಿ ಕೊಹ್ಲಿ ಅವರಿಗೆ ಆರ್‌ಸಿಬಿ ಫ್ರಾಂಚೈಸ್‌ ₹ 17 ಕೋಟಿ ನೀಡಿದೆ. ಇದು ಐಪಿಎಲ್‌ ಆಡಳಿತ ನಿಗದಿ ಮಾಡಿದ್ದ ಮೊತ್ತಕ್ಕಿಂತ ಹೆಚ್ಚು. ಉಳಿಸಿಕೊಳ್ಳುವ ಆಟಗಾರರಿಗೆ ಐಪಿಎಲ್ ನಿಗದಿ ಮಾಡಿರುವ ಗರಿಷ್ಠ ಮೊತ್ತ ₹ 15 ಕೋಟಿ.

ADVERTISEMENT

ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ ಉಳಿಸಿಕೊಂಡಿದ್ದು ಡೇವಿಡ್‌ ವಾರ್ನರ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಉಳಿಸಿಕೊಂಡಿದೆ. ವೇಗದ ಬೌಲರ್‌ ಭುವನೇಶ್ವರ್ ಕುಮಾರ್ ಕೂಡ ಈ ತಂಡದಲ್ಲಿ ಉಳಿದಿದ್ದಾರೆ.

ಹೊರಗೆ ಉಳಿದ ಗೌತಮ್ ಗಂಭೀರ್‌
ಸ್ಫೋಟಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್ ಕಡೆಗಣಿಸಿದೆ. ವೆಸ್ಟ್ ಇಂಡೀಸ್‌ನ ಸುನಿಲ್ ನಾರಾಯಣ್‌ ಮತ್ತು ಆ್ಯಂಡ್ರೆ ರಸೆಲ್ ಅವರನ್ನು ಉಳಿಸಿಕೊಂಡ ತಂಡ ಗಂಭೀರ್ ಅವರನ್ನು ಕೈಬಿಟ್ಟಿದೆ. ಹೀಗಾಗಿ ಅವರು ಈ ಬಾರಿಯ ಹರಾಜು ಪ್ರಕ್ರಿಯೆ ವರೆಗೆ ಕಾಯಬೇಕಾಗಿದೆ.

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್‌ ಉಳಿಸಿಕೊಂಡಿದ್ದು ಡೆಲ್ಲಿ ಡೇರ್ ಡೆವಿಲ್ಸ್‌ ಫ್ರಾಂಚೈಸ್‌ ದಕ್ಷಿಣ ಆಫ್ರಿಕಾದ ವೇಗಿ ಕ್ರಿಸ್ ಮಾರಿಸ್, ದೆಹಲಿಯ ಯುವ ಆಟಗಾರ ರಿಷಭ್ ಪಂತ್‌ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡದೇ ಇರಲು ನಿರ್ಧರಿಸಿದೆ.

ನಾಯಕ ರೋಹಿತ್ ಜೊತೆ ಹಾರ್ದಿಕ್‌ ಪಾಂಡ್ಯ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಕೂಡ ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿದೆ.

ಮೂವರನ್ನು ಉಳಿಸಿಕೊಂಡ ನಾಲ್ಕು ಫ್ರಾಂಚೈಸ್‌
ಒಟ್ಟು ಐದು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ರತಿ ಪ್ರಾಂಚೈಸ್‌ಗೆ ಅವಕಾಶವಿದೆ. ಗುರುವಾರ ನಡೆದ ಮೊದಲ ಹಂತದ ಪ್ರಕ್ರಿಯೆಯಲ್ಲಿ ಮೂವರನ್ನು ಉಳಿಸಿಕೊಳ್ಳಬಹುದಾಗಿತ್ತು. ಉಳಿದ ಇಬ್ಬರನ್ನು ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಉಳಿಸಬಹುದಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಾತ್ರ ಮೂವರನ್ನು ಉಳಿಸಿಕೊಂಡಿವೆ.

ಮರಳಿದ ಸಿಎಸ್‌ಕೆ, ಆರ್‌ಆರ್
ಎರಡು ವರ್ಷಗಳ ಆಮಾನತು ಶಿಕ್ಷೆ ಅನುಭವಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ ) ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿಯ ಐಪಿಎಲ್‌ಗೆ ಮರಳಿವೆ.

2014ರಲ್ಲಿ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಈ ಎರಡೂ ಫ್ರಾಂಚೈಸ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಅವುಗಳ ಬದಲಾಗಿ ಗುಜರಾತ್ ಲಯನ್ಸ್‌ ಮತ್ತು ಪುಣೆ ಸೂಪರ್ ಜೈಂಟ್ಸ್‌ ತಂಡಗಳು ಕಳೆದ ಎರಡು ಆವೃತ್ತಿಗಳಲ್ಲಿ ಆಡಿದ್ದವು. ಸಿಎಸ್‌ಕೆ ನಾಯಕರಾಗಿದ್ದ ದೋನಿ ಪುಣೆ ತಂಡದಲ್ಲಿದ್ದರು. ಗುಜರಾತ್ ತಂಡಕ್ಕೆ ಸುರೇಶ್ ರೈನಾ ನಾಯಕರಾಗಿದ್ದರು.ಈ ವರ್ಷದಿಂದ  ಗುಜರಾತ್ ಮತ್ತು ಪುಣೆ ತಂಡಗಳು ಆಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.