ADVERTISEMENT

ಮೊದಲ ಜಯದ ನಿರೀಕ್ಷೆಯಲ್ಲಿ ಚರ್ಚಿಲ್

ಪಿಟಿಐ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಈಸ್ಟ್‌ಬೆಂಗಾಲ್‌ ತಂಡ ಜಯದ ವಿಶ್ವಾಸದಲ್ಲಿದೆ
ಈಸ್ಟ್‌ಬೆಂಗಾಲ್‌ ತಂಡ ಜಯದ ವಿಶ್ವಾಸದಲ್ಲಿದೆ   

ಮಡಗಾಂವ್‌ (ಪಿಟಿಐ): ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈಸ್ಟ್‌ ಬೆಂಗಾಲ್ ಎದುರು ಆಡಲಿರುವ ಚರ್ಚಿಲ್ ಬ್ರದರ್ಸ್‌ ತಂಡ ಇಲ್ಲಿನ ತಿಲಕ್‌ ಕ್ರೀಡಾಂಗಣದಲ್ಲಿ ನಡೆಯುವ ಐಲೀಗ್ ಪಂದ್ಯದಲ್ಲಿ ಸೋಮವಾರ ಮೊದಲ ಜಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ.

ಆಡಿದ ಐದೂ ಪಂದ್ಯಗಳಲ್ಲಿ ಸೋತಿರುವ ಚರ್ಚಿಲ್ ಬ್ರದರ್ಸ್ ತಂಡ ಹೊಸ ವರ್ಷದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಎರಡು ಬಾರಿ ಚಾಂಪಿಯನ್ ಆಗಿರುವ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಮೊದಲ ಮೂರು ಪಂದ್ಯಗಳ ಸತತ ಸೋಲಿನ ಬಳಿಕ ಮಯೋಕೊಲಾ ಶೆಚೆಕೊ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.

ADVERTISEMENT

ಸಹಾಯಕ ಕೋಚ್‌ ಆಲ್ಫ್ರೆಡ್‌ ಫರ್ನಾಂಡಿಸ್ ಅವರು ಹೊಸ ವರ್ಷದಲ್ಲಿ ತಂಡ ಪುಟಿದೇಳಲಿರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಹೋದ ಆವೃತ್ತಿಯಲ್ಲಿ ಕೂಡ ನಮ್ಮ ತಂಡ ಇದೇ ಪರಿಸ್ಥಿತಿಯನ್ನು ಎದುರಿಸಿತ್ತು. ಬಳಿಕ ಡೆರೆಕ್‌ ಪೆರೇರಾ ಅವರಿಂದಾಗಿ ತಂಡ ಆರನೇ ಸ್ಥಾನ ಪಡೆದಿತ್ತು’ ಎಂದು ಆಲ್ಫ್ರೆಡ್ ಹೇಳಿದ್ದಾರೆ.

ಈ ಋತುವಿನಲ್ಲಿ ಚರ್ಚಿಲ್ ತಂಡ ಭಾರತದ ಮೂವರು ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫುಣೆ ತಂಡದಲ್ಲಿ ಇದ್ದ ವ್ಯಾನೆ ವಾಜ್‌, ಪವನ್ ಕುಮಾರ್ ಹಾಗೂ ಗೋವಾ ತಂಡದಲ್ಲಿ ಆಡಿದ್ದ ಜೋವೆಲ್‌ ಮಾರ್ಟಿನ್ಸ್‌ ತಂಡವನ್ನು ಸೇರಿದ್ದಾರೆ.

ವಾಜ್‌ ಮತ್ತು ಜೋವೆಲ್‌ ಸೋಮವಾರದ ಪಂದ್ಯದಲ್ಲಿ ಆಡಲಿದ್ದಾರೆ.

‘ಈಸ್ಟ್‌ ಬೆಂಗಾಲ್ ಎದುರು ಎಚ್ಚರಿಕೆಯಿಂದ ಆಡಬೇಕು. ಅಗ್ರಸ್ಥಾನದಲ್ಲಿ ಇರುವ ತಂಡದೊಂದಿಗೆ ಆಡಲು ಉತ್ಸಾಹದಲ್ಲಿದ್ದೇವೆ’ ಎಂದು ಆಲ್ಫ್ರೆಡ್ ಹೇಳಿದ್ದಾರೆ.

16 ಪಾಯಿಂಟ್ಸ್‌ಗಳೊಂದಿಗೆ ಈಸ್ಟ್‌ ಬೆಂಗಾಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ‘ತಂಡ ಆರನೇ ಜಯದ ವಿಶ್ವಾಸದಲ್ಲಿದೆ’ ಎಂದು ಕೋಚ್‌ ಖಾಲಿದ್ ಜಮೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.