ADVERTISEMENT

ಆಸ್ಟ್ರೇಲಿಯಾ ಜಯಭೇರಿ

ಆ್ಯಷಸ್: ನಾಲ್ಕು ವಿಕೆಟ್ ಕಬಳಿಸಿದ ಕಮಿನ್ಸ್‌

ಪಿಟಿಐ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಆಸ್ಟ್ರೇಲಿಯಾ ಜಯಭೇರಿ
ಆಸ್ಟ್ರೇಲಿಯಾ ಜಯಭೇರಿ   

ಸಿಡ್ನಿ : ಕೊನೆಯ ಪಂದ್ಯ ದಲ್ಲೂ ಪ್ರವಾಸಿ ಇಂಗ್ಲೆಂಡ್ ತಂಡದ ಆಸೆ ಕೈಗೂಡಲಿಲ್ಲ. ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿ ಮುಂದೆ ಪರದಾಡಿದ ಈ ತಂಡ ಮತ್ತೊಮ್ಮೆ ಸೋಲಿನ ಬಲೆಯಲ್ಲಿ ಸಿಲುಕಿತು. 123 ರನ್‌ಗಳಿಂದ ಗೆದ್ದ ಆತಿಥೇಯರು ಆ್ಯಷಸ್ ಸರಣಿಯನ್ನು 4–0ಯಿಂದ
ತಮ್ಮದಾಗಿಸಿಕೊಂಡರು.

ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಐದನೇ ಪಂದ್ಯದ ಐದನೇ ದಿನ ಇಂಗ್ಲೆಂಡ್‌ ಆಟಗಾರರು ನೀರಸ ಬ್ಯಾಟಿಂಗ್ ಮಾಡಿ ಸೋಲೊಪ್ಪಿ ಕೊಂಡರು. ಮೊದಲ ಇನಿಂಗ್ಸ್‌ನಲ್ಲಿ 303 ರನ್‌ಗಳ ಹಿನ್ನಡೆ ಅನುಭವಿಸಿದ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 180 ರನ್‌ಗಳಿಗೆ ಆಲೌಟಾಯಿತು.

ಭಾನುವಾರದ ಅಂತ್ಯಕ್ಕೆ ತಂಡ 93 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದು ಕೊಂಡಿತ್ತು. ತಂಡದ ಬ್ಯಾಟ್ಸ್‌ಮನ್‌ಗಳು ಅಂತಿಮ ದಿನ ಕ್ರೀಸ್‌ನಲ್ಲಿ ತಳವೂರಲು ನಡೆಸಿದ ಶ್ರಮ ವ್ಯರ್ಥವಾಯಿತು. ನಾಯಕ ಜೋ ರೂಟ್‌  (58; 167 ಎ, 1 ಬೌಂ) ಅರ್ಧ ಶತಕ ಮತ್ತು ವಿಕೆಟ್ ಕೀಪರ್ ಜಾನಿ ಬೇಸ್ಟೊ 38 ರನ್‌ ಗಳಿಸಿದ್ದು ಬಿಟ್ಟರೆ ಇತರ ಯಾರಿಗೂ 30ರ ಗಡಿ ದಾಟಲು ಆಗಲಿಲ್ಲ.

ADVERTISEMENT

ನಾಲ್ಕನೇ ದಿನ ಔಟಾಗದೇ ಉಳಿದಿದ್ದ ರೂಟ್ ಮತ್ತು ಬೇಸ್ಟೊ ಕೊನೆಯ ದಿನ ಬೆಳಿಗ್ಗೆ ಉತ್ತಮ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಹೊಟ್ಟೆನೋವಿನಿಂದ ಬಳಲಿ ನಾಯಕ ಕಣದಿಂದ ನಿವೃತ್ತರಾದದ್ದು ತಂಡಕ್ಕೆ ಭಾರಿ ಪೆಟ್ಟು ನೀಡಿತು. ತಂಡದ ಕೊನೆಯ ಐದು ವಿಕೆಟ್‌ಗಳು 36 ರನ್‌ಗಳಿಗೆ ಪತನಗೊಂಡವು. ರೂಟ್‌, ಸರಣಿಯಲ್ಲಿ ಐದನೇ ಅರ್ಧಶತಕ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್‌ ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 346; ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 7ಕ್ಕೆ 649 ಡಿಕ್ಲೇರ್ಡ್‌; ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌: 88.1 ಓವರ್‌ಗಳಲ್ಲಿ 180 (ಜೋ ರೂಟ್‌ 58, ಜಾನಿ ಬೇಸ್ಟೊ 38, ಟಾಮ್ ಕರನ್‌ 23; ನೇಥನ್ ಲಿಯಾನ್‌ 54ಕ್ಕೆ3, ಪ್ಯಾಟ್‌ ಕಮಿನ್ಸ್‌ 39ಕ್ಕೆ4). ಫಲಿತಾಂಶ: ಆಸ್ಟ್ರೇಲಿಯಾಗೆ ಇನಿಂಗ್ಸ್ ಮತ್ತು 123 ರನ್‌ಗಳ ಜಯ; 4–0ರಲ್ಲಿ ಸರಣಿ. ಪಂದ್ಯ ಶ್ರೇಷ್ಠ: ಪ್ಯಾಟ್ ಕಮಿನ್ಸ್‌ (ಆಸ್ಟ್ರೇಲಿಯಾ), ಸರಣಿ ಶ್ರೇಷ್ಠ : ಸ್ಟೀವ್ ಸ್ಮಿತ್‌ (ಆಸ್ಟ್ರೇಲಿಯಾ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.