ADVERTISEMENT

ಅಂಧರ ವಿಶ್ವಕಪ್‌: ಭಾರತಕ್ಕೆ ಪಾಕ್‌ ಎದುರು ಜಯ

ಪಿಟಿಐ
Published 12 ಜನವರಿ 2018, 18:27 IST
Last Updated 12 ಜನವರಿ 2018, 18:27 IST
ದೀಪಕ್ ಮಲ್ಲಿಕ್‌ ಬ್ಯಾಟಿಂಗ್ ವೈಖರಿ
ದೀಪಕ್ ಮಲ್ಲಿಕ್‌ ಬ್ಯಾಟಿಂಗ್ ವೈಖರಿ   

ದುಬೈ: ದೀಪಕ್ ಮಲ್ಲಿಕ್‌ (79) ಅವರ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಭಾರತ ತಂಡ ಅಂಧರ ವಿಶ್ವಕಪ್‌ ಪಂದ್ಯದಲ್ಲಿ ಶುಕ್ರವಾರ ಪಾಕಿಸ್ತಾನ ತಂಡದ ಎದುರು 7 ವಿಕೆಟ್‌ಗಳಿಂದ ಗೆದ್ದಿದೆ.

ಟಾಸ್ ಗೆದ್ದ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆ ಆ‌ಯ್ಕೆ ಮಾಡಿಕೊಂಡಿತು. 40 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡ ಪಾಕಿಸ್ತಾನ ತಂಡ 282 ರನ್‌ ಕಲೆಹಾಕಿತು. ಇದಕ್ಕುತ್ತರವಾಗಿ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 34.5 ಓವರ್‌ಗಳಲ್ಲಿ ಗುರಿ ತಲುಪಿತು.

ಹರಿಯಾಣದ ದೀಪಕ್ 71 ಎಸೆತಗಳಲ್ಲಿ 79ರನ್‌ ಕಲೆಹಾಕಿದರು. ಅವರು ಎಂಟು ಬೌಂಡರಿಗಳನ್ನು ಬಾರಿಸಿದರು. ವೆಂಕಟೇಶ್‌ (64, 55ಎ), ನಾಯಕ ಅಜಯ್ ರೆಡ್ಡಿ (47, 34ಎ) ತಂಡದ ಮೊತ್ತ ಹಿಗ್ಗಿಸಿದರು. ನಾಲ್ಕನೇ ವಿಕೆಟ್‌ಗೆ ವೆಂಕಟೇಶ್ ಹಾಗೂ ಅಜಯ್‌ 106ರನ್‌ ಪೇರಿಸಿದರು.

ADVERTISEMENT

ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌ ತಂಡ ಉತ್ತಮ ಆರಂಭ ಪಡೆದಿತ್ತು. ಮೊಹಮ್ಮದ್ ಜಮೀಲ್‌ ಹಾಗೂ ನಿಲ್ಸಾರ್‌ ಅಲಿ ಜೊತೆಯಾಗಿ ಮೂರನೇ ವಿಕೆಟ್‌ಗೆ 137ರನ್ ಗಳಿಸಿದ್ದರು. ಜಮೀಲ್‌ ಔಟಾಗದೆ 94 ರನ್ ಗಳಿಸಿದರೆ, ಅಲಿ 63ರನ್‌ ದಾಖಲಿಸಿ ಅಜಯ್ ರೆಡ್ಡಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.