ADVERTISEMENT

ಸುಲಭ ಜಯದ ನಿರೀಕ್ಷೆಯಲ್ಲಿ ಭಾರತ

ಇಂದು ಪಪುವಾ ನ್ಯೂ ಗಿನಿ ವಿರುದ್ಧ ಪಂದ್ಯ

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಭಾರತದ ಆಟಗಾರರು ಪಪುವಾ ನ್ಯೂ ಗಿನಿ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ  ಚಿತ್ರ:ಐಸಿಸಿ
ಭಾರತದ ಆಟಗಾರರು ಪಪುವಾ ನ್ಯೂ ಗಿನಿ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ ಚಿತ್ರ:ಐಸಿಸಿ   

ಮೌಂಟ್‌ ಮೌಂಗಾನುಯಿ, ನ್ಯೂಜಿಲೆಂಡ್‌ : ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಾಸದಿಂದ ಪುಟಿಯುತ್ತಿರುವ ಭಾರತ ತಂಡದವರು 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಈಗ ಮತ್ತೊಂದು ಗೆಲುವಿನತ್ತ ಚಿತ್ತ ಹರಿಸಿದ್ದಾರೆ.

ಪೃಥ್ವಿ ಶಾ ಬಳಗ ಮಂಗಳವಾರ ನಡೆಯುವ ‘ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ವಿರುದ್ಧ ಸೆಣಸಲಿದೆ. ಮೂರು ವಿಶ್ವಕಪ್‌ ಗೆದ್ದಿರುವ ಭಾರತ ಈ ಪಂದ್ಯದಲ್ಲಿ ಸುಲಭವಾಗಿ ಎದುರಾಳಿಗಳ ಸವಾಲು ಮೀರಿ ನಿಲ್ಲುವ ಹುಮ್ಮಸ್ಸಿನಲ್ಲಿದೆ.

ಕರ್ನಾಟಕದ ಹಿರಿಯ ಆಟಗಾರ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಭಾರತದ ಯುವ ಪಡೆ, ಆಸ್ಟ್ರೇಲಿಯಾ ವಿರುದ್ಧ ಆಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದಿತ್ತು.

ADVERTISEMENT

ನಾಯಕ ಪೃಥ್ವಿ, ಮಂಜೀತ್‌ ಖಾಲ್ರಾ ಮತ್ತು ಶುಭಮನ್‌ ಗಿಲ್‌ ಬ್ಯಾಟಿಂಗ್‌ನಲ್ಲಿ ಭಾರತದ ಬಲ ಎನಿಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಕಾಂಗರೂಗಳ ನಾಡಿನ ವಿರುದ್ಧ 180ರನ್‌ಗಳ ಜೊತೆಯಾಟವಾಡಿದ್ದ ಪೃಥ್ವಿ ಮತ್ತು ಮನ್‌ಜೋತ್‌, ನ್ಯೂ ಗಿನಿ ವಿರುದ್ಧವೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಬಲ್ಲರು.

ಗಿಲ್‌ ಮತ್ತು ಹಿಮಾಂಶು ರಾಣಾ ಕೂಡ ಬೇ ಓವಲ್‌ ಮೈದಾನದಲ್ಲಿ ನ್ಯೂ ಗಿನಿ ಬೌಲರ್‌ಗಳ ಮೇಲೆ ಸವಾರಿ ಮಾಡಲು ಸಜ್ಜಾಗಿದ್ದಾರೆ.

ಅನುಕುಲ್‌ ರಾಯ್‌, ಅಭಿಷೇಕ್‌ ಶರ್ಮಾ, ಕಮಲೇಶ್‌ ನಾಗರಕೋಟಿ ಮತ್ತು ಶಿವ ಸಿಂಗ್‌ ಕೂಡ ಬ್ಯಾಟಿಂಗ್‌ನಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಬೌಲಿಂಗ್‌ನಲ್ಲೂ ಭಾರತ ಶಕ್ತಿಯುತವಾಗಿದೆ.

ವಿಶ್ವಾಸದಲ್ಲಿ ನ್ಯೂ ಗಿನಿ: ನ್ಯೂ ಗಿನಿ ತಂಡ ಈಸ್ಟ್‌ ಏಷ್ಯಾ ಪೆಸಿಫಿಕ್‌ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಗೆದ್ದು ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ. ಸೆಮಾ ಕಮೆಯಿ ಪಡೆ ಮೊದಲ ಹೋರಾಟದಲ್ಲಿ 10 ವಿಕೆಟ್‌ಗಳಿಂದ ಜಿಂಬಾಬ್ವೆ ಎದುರು ಸೋತಿತ್ತು. ಎಂಟನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿರುವ ನ್ಯೂ ಗಿನಿ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ.

ತಂಡ ಇಂತಿದೆ: ಭಾರತ: ಪೃಥ್ವಿ ಶಾ (ನಾಯಕ), ಶುಭಮನ್‌ ಗಿಲ್‌, ಆರ್ಯನ್‌ ಜುಯಾಲ್‌, ಅಭಿಷೇಕ್‌ ಶರ್ಮಾ, ಅರ್ಷದೀಪ್‌ ಸಿಂಗ್‌, ಹರ್ವಿಕ್‌ ದೇಸಾಯಿ, ಮಂಜೀತ್ ಖಾಲ್ರಾ, ಕಮಲೇಶ್‌ ನಾಗರಕೋಟಿ, ಪಂಕಜ್‌ ಯಾದವ್‌, ರಿಯಾನ್‌ ಪರಾಗ್‌, ಇಶಾನ್‌ ಪೋರೆಲ್‌, ಹಿಮಾಂಶು ರಾಣಾ, ಅನುಕುಲ್‌ ರಾಯ್‌, ಶಿವಂ ಮಾವಿ ಮತ್ತು ಶಿವ ಸಿಂಗ್‌.

ಆರಂಭ: ಬೆಳಿಗ್ಗೆ 6.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.