ADVERTISEMENT

ಮನಸೆಳೆದ ರಾಜೇಶ್‌, ಲಿಟನ್ ಆಟ

ಗೆಲುವಿನ ಮುನ್ನುಡಿ ಬರೆದ ಕರ್ನಾಟಕ; ತೆಲಂಗಾಣಕ್ಕೆ ನಿರಾಸೆ

ಜಿ.ಶಿವಕುಮಾರ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ಮನಸೆಳೆದ ರಾಜೇಶ್‌, ಲಿಟನ್ ಆಟ
ಮನಸೆಳೆದ ರಾಜೇಶ್‌, ಲಿಟನ್ ಆಟ   

ಬೆಂಗಳೂರು: ಎಸ್‌.ರಾಜೇಶ್‌ ಮತ್ತು ಲಿಟನ್‌ ದಾಸ್‌ ಅವರ ಕಲಾತ್ಮಕ ಆಟ ಉದ್ಯಾನನಗರಿಯ ಫುಟ್‌ಬಾಲ್‌ ಪ್ರೇಮಿಗಳ ಮನಸ್ಸಿಗೆ ಮುದ ನೀಡಿತು.

ಇವರ ಆಟದಲ್ಲಿ ಅರಳಿದ ತಲಾ ಎರಡು ಗೋಲುಗಳು, ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಜಯದ ಮುನ್ನುಡಿ ಬರೆಯಲು ನೆರವಾದವು.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ವಿಘ್ನೇಶ್‌ ಗುಣಶೇಖರನ್‌ ಪಡೆ 5–0 ಗೋಲುಗಳಿಂದ ತೆಲಂಗಾಣವನ್ನು ಹಣಿಯಿತು.

ADVERTISEMENT

50 ವರ್ಷಗಳ ನಂತರ ಬೆಂಗಳೂರಿನಲ್ಲಿ ಸಂತೋಷ್‌ ಟ್ರೋಫಿಯ ಪಂದ್ಯಗಳು ನಡೆಯುತ್ತಿರುವ ಕಾರಣ ತವರಿನ ತಂಡವನ್ನು ಬೆಂಬಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿದ್ದರು. ಅವರಿಗೆ ಕರ್ನಾಟಕದ ಆಟಗಾರರು ಮನರಂಜನೆಯ ರಸದೌತಣ ಉಣಬಡಿಸಿದರು.

ಶುರುವಿನಿಂದಲೇ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸುವ ತಂತ್ರ ಅನುಸರಿಸಿದ ವಿಘ್ನೇಶ್‌ ಬಳಗಕ್ಕೆ 7ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಎಸ್‌.ರಾಜೇಶ್‌, ಲೀಲಾಜಾಲವಾಗಿ ಚೆಂಡನ್ನು ಗುರಿ ಸೇರಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಆ ನಂತರ ಆತಿಥೇಯರು ಇನ್ನಷ್ಟು ಆಕ್ರಮಣಕಾರಿಯಾದರು. ಎಸ್‌.ಕೆ.ಅಜರುದ್ದೀನ್‌, ರಾಜೇಶ್‌, ಲಿಟನ್‌ ಶಿಲ್‌, ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಪೆನಾಲ್ಟಿ ಕಾರ್ನರ್‌ ಸಿಕ್ಕರೂ ಪ್ರಯೋಜನವಾಗಲಿಲ್ಲ.  ಹೀಗಿದ್ದರೂ ಕರ್ನಾಟಕದ ಆಟಗಾರರು ಛಲ ಕಳೆದುಕೊಳ್ಳಲಿಲ್ಲ. 18ನೇ ನಿಮಿಷದಲ್ಲಿ ಮೋಡಿ ಮಾಡಿದ ಲಿಟನ್‌ ಶಿಲ್‌, ಆತಿಥೇಯರ ಖಾತೆಗೆ ಎರಡನೇ ಗೋಲು ಸೇರ್ಪಡೆ ಮಾಡಿದರು. ಹೀಗಾಗಿ ತಂಡ 2–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ತೆಲಂಗಾಣಕ್ಕೆ ಹಿನ್ನಡೆ ತಗ್ಗಿಸಿಕೊಳ್ಳಲು ಹಲವು ಅವಕಾಶಗಳು ಸಿಕ್ಕಿದ್ದವು. ಆದರೆ ಶ್ರೀ ಕುಮಾರ್‌ ಪಡೆ ಇವುಗಳ ಲಾಭ ಎತ್ತಿಕೊಳ್ಳಲಿಲ್ಲ.

50ನೇ ನಿಮಿಷದ ಬಳಿಕ ಕರ್ನಾಟಕ ತಂಡದವರು ಆಟದ ವೇಗ ಹೆಚ್ಚಿಸಿಕೊಂಡರು. ಅಜರುದ್ದೀನ್‌, ರಾಜೇಶ್‌, ಶಹಬಾಜ್‌, ಲಿಯೊನ್‌ ಆಗಸ್ಟಿನ್‌, ಎದುರಾಳಿಗಳ ರಕ್ಷಣಾ ಕೋಟೆ ಭೇದಿಸುವ ಪ್ರಯತ್ನ ಮುಂದುವರಿಸಿದರು. 68ನೇ ನಿಮಿಷದಲ್ಲಿ ಲಿಟನ್‌ ಶಿಲ್‌ ತಂಡದ ಸಂಭ್ರಮ ಹೆಚ್ಚಿಸಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿಗಳ ಆವರಣ ಪ್ರವೇಶಿಸಿದ ಅವರು ಅದನ್ನು ಗೋಲುಪೆಟ್ಟಿಗೆಯ ಎಡತುದಿಯಿಂದ ಒದ್ದು ಗುರಿ ಸೇರಿಸಿದರು.

ಇದರ ಬೆನ್ನಲ್ಲೇ ಮುಂಚೂಣಿ ವಿಭಾಗದ ಆಟಗಾರ ರಾಜೇಶ್‌ (69ನೇ ನಿ.) ಮಿಂಚು ಹರಿಸಿದರು. ಲಿಟನ್‌ ಒದ್ದು ಕಳುಹಿಸಿದ ಚೆಂಡನ್ನು ಅವರು ‘ಸೈಕಲ್‌ ಕಿಕ್‌’ ಮೂಲಕ ಗುರಿ ತಲುಪಿಸಿದ್ದು ಮನ ಸೆಳೆಯುವಂತಿತ್ತು.

ಇಷ್ಟಾದರೂ ವಿಘ್ನೇಶ್‌ ಬಳಗದ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. ಎದುರಾಳಿಗಳ ದುರ್ಬಲ ರಕ್ಷಣಾ ಕೋಟೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿಸಿದ ತಂಡ 83ನೇ ನಿಮಿಷದಲ್ಲಿ ಮುನ್ನಡೆಯನ್ನು 5–0ಗೆ ಹಿಗ್ಗಿಸಿಕೊಂಡಿತು. ರಕ್ಷಣಾ ವಿಭಾಗದ ಆಟಗಾರ ಶಹಬಾಜ್‌ ಖಾನ್‌ ಕಾಲ್ಚಳಕದಲ್ಲಿ ಗೋಲು ಅರಳಿತು. ಆ ನಂತರವೂ ತಂಡ ಗುಣಮಟ್ಟದ ಆಟ ಆಡಿ ಸಂಭ್ರಮಿಸಿತು.

********

ಕರ್ನಾಟಕದ ಪರ ಗೋಲು ಗಳಿಸಿದವರು

ಆಟಗಾರ,ನಿಮಿಷ

ಎಸ್‌.ರಾಜೇಶ್‌,7 ಮತ್ತು 69

ಲಿಟನ್‌ ಶಿಲ್‌,18 ಮತ್ತು 68

ಶಹಬಾಜ್‌ ಖಾನ್‌,83

*********

ಇಂದಿನ ಪಂದ್ಯ

ಕೇರಳ–ಆಂಧ್ರಪ್ರದೇಶ

ಸಂಜೆ: 4.

ಸರ್ವಿಸಸ್‌ಗೆ ಮಣಿದ ಪುದುಚೇರಿ

‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸರ್ವಿಸಸ್‌ 4–0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು.

ವಿಜಯಿ ತಂಡದ ಅರ್ಜುನ್‌ ಟುಡು (20), ಗೌತಮ್‌ ಸಿಂಗ್‌ (72), ನಾನಿಶ್‌ ಸಿಂಗ್‌ (59) ಗೋಲು ಬಾರಿಸಿದರು. ಪುದುಚೇರಿ ತಂಡದ ಪಿ.ಸಾಜಿ ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದಿದ್ದರಿಂದ ಸರ್ವಿಸಸ್‌ ಖಾತೆಗೆ ‘ಉಡುಗೊರೆ’ ರೂಪದಲ್ಲಿ ನಾಲ್ಕನೇ ಗೋಲು ಸೇರ್ಪಡೆಯಾಯಿತು.

ಪುದುಚೇರಿ ಪರ ಜಿ.ಕಾರ್ತಿಕೇಯನ್‌ (9) ಏಕೈಕ ಗೋಲು ದಾಖಲಿಸಿದರು.

* ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಗೆಲುವು ಒಲಿದಿದೆ. ಈ ಪಂದ್ಯದಲ್ಲಿ ಗೋಲು ಗಳಿಸುವ ಹಲವು ಅವಕಾಶಗಳನ್ನು ನಾವು ಕೈಚೆಲ್ಲಿದೆವು. ಮುಂದಿನ ಪಂದ್ಯದಲ್ಲಿ ಈ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ

–ಪಿ.ಮುರಳಿಧರನ್‌, ಕರ್ನಾಟಕ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.