ADVERTISEMENT

‘ನ್ಯೂ ಕಬಡ್ಡಿ ಫೆಡರೇಷನ್’ ಅಸ್ತಿತ್ವಕ್ಕೆ

ಕಬಡ್ಡಿ ಫೆಡರೇಷನ್‌ನಲ್ಲಿ ಬಂಡಾಯ: ಪ್ರೊ ಕಬಡ್ಡಿಗೆ ಸೆಡ್ಡು

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:29 IST
Last Updated 20 ಜನವರಿ 2018, 19:29 IST

ಬೆಂಗಳೂರು: ರಾಜ್ಯ ಕಬಡ್ಡಿ ಸಂಸ್ಥೆ ಮತ್ತು ರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ವಿರುದ್ಧ ಹಿರಿಯ ಕಬಡ್ಡಿಪಟುಗಳು ಮತ್ತು ಆಟಗಾರರು ಬಂಡಾಯದ ಬಾವುಟ ಹಾರಿಸಿದ್ದಾರೆ.

ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಆರಂಭಿಸಿರುವ ಅವರು ಪ್ರೊ ಕಬಡ್ಡಿ ಲೀಗ್‌ ಮಾದರಿಯಲ್ಲೇ ‘ಹೇ.. ಕಬಡ್ಡಿ ಲೀಗ್‌’ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಎಂ.ವಿ.ಪ್ರಸಾದ್ ಬಾಬು ‘ರಾಜ್ಯ ಸಂಸ್ಥೆ ಮತ್ತು ರಾಷ್ಟ್ರೀಯ ಫೆಡರೇಷನ್‌ನಲ್ಲಿ ಹಣ ಇದ್ದವರಿಗೆ ಮಾತ್ರ ಅವಕಾಶವಿದೆ. ಆಟಗಾರರು ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸಲು ಪದಾಧಿಕಾರಿಗಳಿಗೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ರಾಷ್ಟ್ರೀಯ ಫೆಡರೇಷನ್‌ ಜನಾರ್ದನ್ ಸಿಂಗ್ ಗೆಹ್ಲೋಟ್ ಅವರ ಕುಟುಂಬದ ಆಸ್ತಿಯಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಮೇ ಅಂತ್ಯದಲ್ಲಿ ಹೇ... ಕಬಡ್ಡಿ ಆಯೋಜಿಸಲು ನಿರ್ಧರಿಸಲಾಗಿದೆ. ಇದರ ಉದ್ಘಾಟನೆ ಮುಂಬೈಯಲ್ಲಿ ನಡೆಯಲಿದ್ದು ಮೊದಲ ಚರಣದ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ. ನಾಗಪುರ, ಪಂಜಾಬ್‌, ದೆಹಲಿ ಮತ್ತು ಚೆನ್ನೈನಲ್ಲೂ ಪಂದ್ಯಗಳು ನಡೆಯಲಿವೆ. ಏಪ್ರಿಲ್‌ನಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಷಿಪ್‌ ಆಯೋಜಿಸುವ ಯೋಜನೆಯೂ ಇದೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ತಂಡಗಳ ಆಯ್ಕೆಯನ್ನು ಕೂಡ ನಮ್ಮ ಸಂಸ್ಥೆ ನಡೆಸಲಿದೆ. ಮೊದಲ ಆಯ್ಕೆ ಪ್ರಕ್ರಿಯೆ ಇದೇ ತಿಂಗಳ 26ರಿಂದ 28ರವರೆಗೆ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಜೈಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಕಬಡ್ಡಿಗೆ ತಂಡಗಳನ್ನು ಇಲ್ಲಿ ಆಯ್ಕೆ ಮಾಡಲಾಗುವುದು’ ಎಂದು ಪ್ರಸಾದ್ ಬಾಬು ವಿವರಿಸಿದರು.

ಸಂಘಟನಾ ಕಾರ್ಯದರ್ಶಿ ಸಿ. ಹೊನ್ನಪ್ಪಗೌಡ, ಜಂಟಿ ಕಾರ್ಯದರ್ಶಿ ಸಿ.ಎಲ್‌.ಮೂರ್ತಿ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಎಚ್‌.ಎಸ್.ಶಾಮಣ್ಣಗೌಡ, ಮಾಜಿ ಶಾಸಕ ರಾಜೇಂದ್ರ ಹಾಗೂ ವಿವಿಧ ಜಿಲ್ಲಾ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

**

ರಾಜ್ಯ ಸಂಸ್ಥೆಗೇನೂ ನಷ್ಟ ಇಲ್ಲ

ಆರೋಪಗಳ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಜ್ಯ ಸಂಸ್ಥೆಯ ಅಧ್ಯಕ್ಷ ಹನುಮಂತೇಗೌಡ ‘ಕೆಲವರು ಕೂಡಿಕೊಂಡು ಹೊಸ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಅದರಿಂದ ಸಂಸ್ಥೆಗೆ ಯಾವ ನಷ್ಟವೂ ಇಲ್ಲ. ನಮ್ಮ ಚಟುವಟಿಕಗಳು ನಿರಂತರವಾಗಿ ನಡೆಯಲಿವೆ’ ಎಂದರು.

‘ಸಂಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ. ಎಲ್ಲವೂ ಪಾರದರ್ಶಕವಾಗಿದೆ’ ಎಂದ ಅವರು ‘ಹೊಸ ಸಂಘಟನೆಯವರ ಜೊತೆ ಗುರುತಿಸಿಕೊಂಡವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.