ADVERTISEMENT

ಮೈಸೂರು ವಿವಿ ತಂಡದ ಶುಭಾರಂಭ

ಅಖಿಲ ಭಾರತ ಅಂತರ ವಿ.ವಿ. ಕೊಕ್ಕೊ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಕುರುಕ್ಷೇತ್ರ ವಿ.ವಿ ತಂಡದ ಸಾಹಿಲ್ ಅವರು ಮೈಸೂರು ವಿ.ವಿ ತಂಡದ ಎಚ್.ಆರ್.ಮಂಜು ಅವರನ್ನು ಔಟ್ ಮಾಡಲು ಪ್ರಯತ್ನಿಸಿದರು  ಪ್ರಜಾವಾಣಿ ಚಿತ್ರ: ಇರ್ಷಾದ್ ಮಹಮ್ಮದ್
ಕುರುಕ್ಷೇತ್ರ ವಿ.ವಿ ತಂಡದ ಸಾಹಿಲ್ ಅವರು ಮೈಸೂರು ವಿ.ವಿ ತಂಡದ ಎಚ್.ಆರ್.ಮಂಜು ಅವರನ್ನು ಔಟ್ ಮಾಡಲು ಪ್ರಯತ್ನಿಸಿದರು ಪ್ರಜಾವಾಣಿ ಚಿತ್ರ: ಇರ್ಷಾದ್ ಮಹಮ್ಮದ್   

ಮೈಸೂರು: ಆತಿಥೇಯ ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವ ವಿದ್ಯಾಲಯ ತಂಡಗಳು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಶುಭಾರಂಭ ಮಾಡಿದವು.

ಮೈಸೂರು ವಿ.ವಿ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ ಮೊದಲ ಪಂದ್ಯದಲ್ಲಿ 13–11 ರಲ್ಲಿ ಕುರುಕ್ಷೇತ್ರ ವಿ.ವಿ ತಂಡವನ್ನು ಮಣಿಸಿತು. ವಿಜಯಿ ತಂಡದವರು ಎರಡೂ ಇನಿಂಗ್ಸ್‌ಗಳಲ್ಲಿ ಮೇಲುಗೈ ಸಾಧಿಸಿದರು.

ಆತಿಥೇಯ ತಂಡ ಎರಡನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಬರ್ದ್ವಾನ್‌ ವಿ.ವಿ ವಿರುದ್ಧ ಗೆದ್ದಿತು. ಮೈಸೂರಿನ ತಂಡ ದಕ್ಷಿಣ ವಲಯ ಅಂತರ ವಿ.ವಿ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.

ADVERTISEMENT

ದಾವಣಗೆರೆ ವಿ.ವಿ ತಂಡ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ 12–5 ರಲ್ಲಿ ಪಂಜಾಬ್‌ ವಿ.ವಿ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 12–3 ರಲ್ಲಿ ಸಿಲಿಗುರಿಯ ಉತ್ತರ ಬಂಗಾಳ ವಿ.ವಿ ವಿರುದ್ಧ ಜಯಿಸಿತು. ಮಂಗಳೂರು ವಿ.ವಿ 18–6 ರಲ್ಲಿ ದೆಹಲಿ ವಿ.ವಿ ತಂಡವನ್ನು ಸೋಲಿಸಿತು. ಅನುಭವಿ ಆಟಗಾರರನ್ನು ಒಳಗೊಂಡ ಮಂಗಳೂರು ತಂಡ ಸಲೀಸಾಗಿ ಪಾಯಿಂಟ್‌ ಕಲೆಹಾಕಿತು.

ಎಸ್‌ಆರ್‌ಟಿಎಂಗೆ ಜಯ: ಕಳೆದ ಬಾರಿಯ ಚಾಂಪಿಯನ್ ಮಹಾರಾಷ್ಟ್ರದ ನಾಂದೇಡ್‌ನ ಎಸ್‌ಆರ್‌ಟಿಎಂ ವಿ.ವಿ ಮತ್ತು ‘ರನ್ನರ್ ಅಪ್’ ಮುಂಬೈ ವಿ.ವಿ ತಂಡಗಳು ಸುಲಭವಾಗಿ ಜಯಿಸಿತು.

ಎಸ್‌ಆರ್‌ಟಿಎಂ ಮೊದಲ ಪಂದ್ಯದಲ್ಲಿ 18–3 ರಲ್ಲಿ ವಿದ್ಯಾಸಾಗರ ವಿ.ವಿ ಮೇಲೆ ಹಾಗೂ ಎರಡನೇ ಪಂದ್ಯದಲ್ಲಿ 16–10 ರಲ್ಲಿ ಹರಿಯಾಣದ ಮಹರ್ಷಿ ದಯಾನಂದ ವಿ.ವಿ ಎದುರೂ ಜಯಿಸಿತು.

ಮುಂಬೈ ವಿ.ವಿ ತಂಡ 20–6 ರಲ್ಲಿ ಉತ್ತರ ಬಂಗಾಳ ವಿ.ವಿ ವಿರುದ್ಧವೂ, 14–10 ರಲ್ಲಿ ಪಂಜಾಬ್ ವಿ.ವಿ ಮೇಲೂ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು.

ಕೊಲ್ಲಾಪುರದ ಶಿವಾಜಿ ವಿ.ವಿ ತಂಡ 11–8 ರಲ್ಲಿ ಉತ್ತರ ಪ್ರದೇಶದ ಜೌನ್‌ಪುರದ ವಿಬಿಎಸ್‌ಪಿ ವಿ.ವಿ ಮೇಲೂ, 17–5 ರಲ್ಲಿ ದೆಹಲಿ ವಿ.ವಿ ಎದುರೂ ಗೆದ್ದಿತು.

ಮೊದಲ ದಿನದ ಇತರ ಲೀಗ್‌ ಪಂದ್ಯಗಳಲ್ಲಿ ಸಾವಿತ್ರಿಬಾಯಿ ಫುಲೆ ವಿ.ವಿ 18–8 ರಲ್ಲಿ ಕುರುಕ್ಷೇತ್ರ ವಿ.ವಿ ಎದುರೂ, ಕೇರಳದ ಕಲ್ಲಿಕೋಟೆ ವಿ.ವಿ 10–7 ರಲ್ಲಿ ಮಹರ್ಷಿ ದಯಾನಂದ ವಿ.ವಿ ವಿರುದ್ಧವೂ ಜಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.