ADVERTISEMENT

ವೋಜ್ನಿಯಾಕಿಗೆ ಚೊಚ್ಚಲ ಕಿರೀಟ

ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ: ಸಿಮೋನಾ ಹಲೆಪ್‌ಗೆ ಸೋಲು

ಏಜೆನ್ಸೀಸ್
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಟ್ರೋಫಿಯೊಂದಿಗೆ ಕರೊಲಿನಾ ವೋಜ್ನಿಯಾಕಿ. –ರಾಯಿಟರ್ಸ್ ಚಿತ್ರ
ಟ್ರೋಫಿಯೊಂದಿಗೆ ಕರೊಲಿನಾ ವೋಜ್ನಿಯಾಕಿ. –ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ವೃತ್ತಿಜೀವನದ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದ ಕರೊಲಿನಾ ವೋಜ್ನಿಯಾಕಿ ಅಂಗಳದಲ್ಲಿಯೇ ಭಾವುಕರಾಗಿ ಕಣ್ಣೀರು ಹಾಕಿದರು.

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಡೆನ್ಮಾರ್ಕ್‌ನ ಆಟಗಾರ್ತಿಗೆ ಒಲಿದಿದೆ. ಶನಿವಾರ ಇಲ್ಲಿನ ರಾಡ್ ಲೇವರ್ ಅರೆನಾ ಅಂಕಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೋಜ್ನಿಯಾಕಿ 7–6, 3–6, 6–4ರಲ್ಲಿ ರುಮೇನಿಯಾದ ಸಿಮೋನಾ ಹಲೆಪ್‌ಗೆ ಸೋಲುಣಿಸಿದರು. 43ನೇ ಪ್ರಯತ್ನದಲ್ಲಿ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ.

ಮೊದಲ ಟ್ರೋಫಿಗೆ ಮುತ್ತಿಡುವ ಕನಸಿನೊಂದಿಗೆ ಆಡಿದ ವೋಜ್ನಿಯಾಕಿ ಪ್ರತೀ ಹೊಡೆತದಲ್ಲೂ ನಿಖರ ಹಾಗೂ ಸ್ಪಷ್ಟ ಆಟದಿಂದ ಗಮನಸೆಳೆದರು.

ADVERTISEMENT

‘ಸಾಕಷ್ಟು ವರ್ಷದಿಂದ ಈ ಕ್ಷಣಕ್ಕಾಗಿ ಕನಸು ಕಾಣುತ್ತಿದ್ದೆ. ಈಗಲೂ ನನ್ನ ಧ್ವನಿ ನಡುಗುತ್ತಿದೆ. ಮಾತು ಹೊರಗೆ ಬರುತ್ತಿಲ್ಲ. ಸಂತೋಷವನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ’ ಎಂದು ವೋಜ್ನಿಯಾಕಿ ಪಂದ್ಯದ ಬಳಿಕ ನಡೆದ ಸುದ್ದಿ ಗೋಷ್ಠಿಯಲ್ಲಿ ಮತ್ತೊಮ್ಮೆ ಭಾವುಕರಾದರು.

‘ನಾನು ಯಾವತ್ತೂ ಅತ್ತಿಲ್ಲ. ಆದರೆ ಅಂತಿಮ ಸೆಟ್‌ ಗೆದ್ದಾಗ ಅಳು ತಡೆದುಕೊಳ್ಳಲು ಆಗಲಿಲ್ಲ. ಇಷ್ಟೊಂದು ಭಾವುಕಳಾಗಿದ್ದು ಇದೇ ಮೊದಲು. ಇದು ನನ್ನ ಬದುಕಿನ ಸ್ಮರಣೀಯ ಗಳಿಗೆ. ಸಿಮೋನಾ ಹಲೆಪ್‌ಗೆ ಇದು ಕಠಿಣ ಸಂದರ್ಭ. ಫೈನಲ್‌ವರೆಗೂ ಉತ್ತಮವಾಗಿ ಆಡಿದ್ದ ಅವರಿಗೆ ಪ್ರಶಸ್ತಿ ಗೆದ್ದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅವರು ಅತ್ಯುತ್ತಮ ಆಟಗಾರ್ತಿ’ ಎಂದು 27 ವರ್ಷದ ವೋಜ್ನಿಯಾಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.