ADVERTISEMENT

ಚಿನ್ನಕ್ಕೆ ಮುತ್ತಿಟ್ಟ ಮೇರಿ ಕೋಮ್‌

ಪಿಟಿಐ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ಮೇರಿ ಕೋಮ್‌
ಮೇರಿ ಕೋಮ್‌   

ನವದೆಹಲಿ : ಪ್ರಬಲ ಪಂಚ್ ಹಾಗೂ ನಿಖರ ದಾಳಿಯಿಂದ ರಿಂಗ್‌ನಲ್ಲಿ ಮಿಂಚುಹರಿಸಿದ ಭಾರತದ ಎಮ್‌.ಸಿ ಮೇರಿ ಕೋಮ್‌ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನ ಗೆದ್ದುಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

ಮೇರಿ ಕೋಮ್ ಸೇರಿದಂತೆ ಭಾರತದ ಪ್ವಿಲಾವೊ ಬಾಸುಮತ್ರಿ, ಲೊವ್‌ಲಿನಾ ಬೋರ್ಗೊಹೇನ್‌, ಸಂಜಿತ್‌ ಹಾಗೂ ಮನೀಷ್‌ ಕೌಶಿಕ್‌ ಚಿನ್ನ ಗೆದ್ದು ಸಂಭ್ರಮಿಸಿದರು.

ಗುರುವಾರ ನಡೆದ ಮಹಿಳೆಯರ 48ಕೆ.ಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಮೇರಿ 4–1ರಲ್ಲಿ ಫಿಲಿಪ್ಪೀನ್ಸ್‌ನ ಜೋಸಿ ಗಬುಕೊ ಅವರನ್ನು ಮಣಿಸಿದರು. ಮೊದಲ ನಿಮಿಷದಿಂದಲೇ ಎದುರಾಳಿಯನ್ನು ಹಿಮ್ಮೆಟ್ಟಿಸಿದ ಮೇರಿ ಪ್ರಬಲ ಪಂಚ್‌ಗಳಿಂದ ಗಮನಸೆಳೆದರು. ಪಂದ್ಯದ ಅಂತಿಮ ನಿಮಿಷದವರೆಗೂ ಅವರು ಆಕ್ರಮಣಕಾರಿಯಾಗಿ ಆಡಿದರು.

ADVERTISEMENT

64ಕೆ.ಜಿ ವಿಭಾಗದಲ್ಲಿ ಬಾಸುಮತ್ರಿ ಚಿನ್ನ ಗೆದ್ದರು. 3–2ರಲ್ಲಿ ಅವರು ಥಾಯ್ಲೆಂಡ್‌ನ ಸೂದಪೋರ್ನ್‌ ಸಿಸೊಂಡಿ ವಿರುದ್ಧ ಗೆದ್ದರು. 2015ರಲ್ಲಿ ಅವರು ಸರ್ಬಿಯಾದಲ್ಲಿ ನಡೆದ ರಾಷ್ಟ್ರೀಯ ಕಪ್‌ ಟೂರ್ನಿಯಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಅಸ್ಸಾಂನ ಬಾಕ್ಸರ್‌ ಲೊವ್‌ಲಿನಾ 69ಕೆ.ಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಭಾರತದ ಪೂಜಾ ಎದುರು ಫೈನಲ್ ಪಂದ್ಯವನ್ನು ಗೆದ್ದರು. 60ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಎಲ್‌.ಸರಿತಾ ದೇವಿ 2–3ರಲ್ಲಿ ಫಿನ್‌ಲೆಂಡ್‌ನ ಮೀರಾ ಪೊಟ್ಕೆನನ್ ಎದುರು ಫೈನಲ್‌ನಲ್ಲಿ ಸೋತರು.

75ಕೆ.ಜಿ ವಿಭಾಗದಲ್ಲಿ ಸ್ವೀಟಿ ಬೋರಾ ಬೆಳ್ಳಿ ಗೆದ್ದರು.

ಸಂಜಿತ್‌ಗೆ ಚಿನ್ನ: ಉಜ್ಬೇಕಿಸ್ತಾನ ಹಾಗೂ ಕ್ಯೂಬಾ ತಂಡಗಳ ಪ್ರಾಬಲ್ಯದ ಎದುರು ಭಾರತ ಪುರುಷ ಬಾಕ್ಸರ್‌ಗಳು ಮಂಕಾದರು. ಆದರೆ ಸಂಜಿತ್‌ ನಿರಾಸೆ ಉಂಟುಮಾಡಲಿಲ್ಲ. 91ಕೆ.ಜಿ ವಿಭಾಗದಲ್ಲಿ ಅವರು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. 3–2ರಲ್ಲಿ ಉಜ್ಬೇಕಿಸ್ತಾನದ ಸನಿಯರ್ ತುರುಸೊವನ್ ವಿರುದ್ಧ ಗೆದ್ದರು.

ಸೆಮಿಫೈನಲ್‌ನಲ್ಲಿ ಶಿವಥಾಪಗೆ ಸೋಲುಣಿಸಿದ್ದ ಮನೀಷ್ ಕೌಶಿಕ್‌ಗೆ ಅದೃಷ್ಟದ ಚಿನ್ನ ಒಲಿದಿದೆ. 60ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಷ್ ಅವರ ಎದುರಾಳಿ ಮಂಗೋಲಿಯಾದ ಬತ್ತುಮುರ್‌ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹಿಂದೆಸರಿದರು.

91ಕೆ.ಜಿ ವಿಭಾಗದಲ್ಲಿ ಸತೀಶ್ ಕುಮಾರ್‌ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಉಜ್ಬೇಕಿಸ್ತಾನದ ಬಕೋದಿರ್ ಎದುರು ಅವರು ಸೋತರು. ದಿನೇಶ್ ದಾಗರ್‌ 69ಕೆ.ಜಿ ವಿಭಾಗದಲ್ಲಿ ಬೆಳ್ಳಿಗೆ ಕೊರಳೊಡ್ಡಿದರು. ದಿನೇಶ್ ಅವರು ಕೂಡ ಫೈನಲ್ ಬೌಟ್‌ನಲ್ಲಿ ಉಜ್ಬೇಕಿಸ್ತಾನದ ಬಾಬೊ ವಿರುದ್ಧ ಪರಾಭವಗೊಂಡರು. ದೇವಾಂಶ್‌ ಜೈಸ್ವಾಲ್‌ (81ಕೆ.ಜಿ) ಬೆಳ್ಳಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.