ADVERTISEMENT

ಪಾಕಿಸ್ತಾನಕ್ಕೆ ಮೂರನೇ ಸ್ಥಾನ

ಪಿಟಿಐ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಕ್ವೀನ್ಸ್‌ಟೌನ್‌, ನ್ಯೂಜಿಲೆಂಡ್‌ :  ಪಾಕಿಸ್ತಾನ ತಂಡ ಐಸಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆಯಿತು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಗುರುವಾರ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ಎದುರಿನ ಪ್ಲೇ ಆಫ್‌ ಪಂದ್ಯ ಮಳೆಗೆ ಆಹುತಿಯಾಗಿದೆ.  ಎಡೆಬಿಡದೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ.  ಆದ್ದರಿಂದ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡಕ್ಕೆ ಮೂರನೇ ಸ್ಥಾನ ನೀಡಲಾಯಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ತಂಡವು ಅಫ್ಗಾನಿಸ್ತಾನ ತಂಡವನ್ನು ಸೋಲಿಸಿತ್ತು. ಹಿಂದಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ಐರ್ಲೆಂಡ್ ಎದುರು ಸೋತಿತ್ತು. ಆದ್ದರಿಂದ ಹೆಚ್ಚು ಪಾಯಿಂಟ್ಸ್ ಹೊಂದಿರುವ ಪಾಕ್ ತಂಡಕ್ಕೆ ಮೂರನೇ ಸ್ಥಾನ ಸಿಕ್ಕಿದೆ.

ADVERTISEMENT

ಅಫ್ಗಾನಿಸ್ತಾನ ಮೊದಲ ಬಾರಿಗೆ ನಾಲ್ಕನೇ ಸ್ಥಾನ ಪಡೆದಿದೆ. ಈ ಮೊದಲು ಆಡಿದ ನಾಲ್ಕು ವಿಶ್ವಕಪ್‌ಗಳಲ್ಲಿ 16, 10, 7 ಮತ್ತು 9ನೇ ಸ್ಥಾನ ಪಡೆದಿತ್ತು.  ಪಾಕಿಸ್ತಾನ  ಮೂರನೇ ಬಾರಿ ಇಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 2000 ಮತ್ತು 2010ರಲ್ಲಿಯೂ ಮೂರನೇ ಸ್ಥಾನದಲ್ಲಿತ್ತು.  2004 ಮತ್ತು 2006ರಲ್ಲಿ ಪಾಕ್ ಚಾಂಪಿಯನ್ ಆಗಿತ್ತು. ಈ ಬಾರಿ ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರು 203 ರನ್‌ಗಳಿಂದ ಸೋತಿದೆ.

ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ ತಂಡ ಆಸ್ಟ್ರೇಲಿಯಾದ ಎದುರು ಆರು ವಿಕೆಟ್‌ಗಳಿಂದ ಸೋತಿತ್ತು. ಲೀಗ್ ಹಂತದಲ್ಲಿ ನ್ಯೂಜಿಲೆಂಡ್‌ ಎದುರು 202 ರನ್‌ಗಳಿಂದ ಗೆದ್ದಿತ್ತು.

‘ನಮ್ಮ ತಂಡ  ಫೈನಲ್ ಪ್ರವೇಶಿಸುವ ಕನಸು ನನಸಾಗಿಲ್ಲ. ಆದರೆ ನಮಗಿಂತ ಉತ್ತಮವಾಗಿ ಆಡಿದ ತಂಡಗಳು ಮೇಲಿನ ಸ್ಥಾನದಲ್ಲಿವೆ. ಅವರಿಗೆ ಶುಭವಾಗಲಿ’ ಎಂದು ಪಾಕಿಸ್ತಾನ ತಂಡದ ಕೋಚ್ ಮನ್ಸೂರ್‌ ರಾಣಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.