ADVERTISEMENT

ಸೂಪರ್‌ ಡಿವಿಷನ್‌ ಫುಟ್‌ಬಾಲ್‌: ಓಜೋನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ಬೆಂಗಳೂರು: ರಾಬರ್ಟ್‌ ತಂದಿತ್ತ ಎರಡು ಗೋಲುಗಳ ನೆರವಿನಿಂದ ಓಜೋನ್‌ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಓಜೋನ್‌ ತಂಡ 4–1 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಓಜೋನ್‌ ತಂಡದ ವಿನಿಲ್‌ ಪೂಜಾರಿ 27ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ತಂದುಕೊಟ್ಟರು. 35ನೇ ನಿಮಿಷದಲ್ಲಿ ಸಬೀತ್‌ ಮೋಡಿ ಮಾಡಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ADVERTISEMENT

ಆ ನಂತರ ರಾಬರ್ಟ್‌ ಮಿಂಚಿದರು. ಅವರು 39 ಮತ್ತು 59ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿ ತಂಡದ ಗೆಲುವು ಖಾತ್ರಿ ಪಡಿಸಿದರು. ಸಿಐಎಲ್‌ ತಂಡದ ವಿಜಯ್‌ 90ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಈಗಲ್ಸ್‌ಗೆ ಜಯ: ‘ಎ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಈಗಲ್ಸ್‌ ತಂಡದವರು ಗೆಲುವಿನ ಸಿಹಿ ಸವಿದರು.

ಈಗಲ್ಸ್‌ ತಂಡ 3–1 ಗೋಲುಗಳಿಂದ ಬಿಯುಎಫ್‌ಸಿ ತಂಡವನ್ನು ಮಣಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಈಗಲ್ಸ್ 3ನೇ ನಿಮಿಷದಲ್ಲಿ ಖಾತೆ ತೆರೆಯಿತು. ಮಣಿವಣ್ಣನ್‌ ಗೋಲು ಗಳಿಸಿದರು.

15ನೇ ನಿಮಿಷದಲ್ಲಿ ಬಿಯುಎಫ್‌ಸಿ ತಂಡದ ಭರತ್‌ ಚೆಂಡನ್ನು ಗುರಿ ತಲುಪಿಸಿ 1–1ರ ಸಮಬಲಕ್ಕೆ ಕಾರಣರಾದರು.

ಆ ನಂತರ ಈಗಲ್ಸ್‌ ಪ್ರಾಬಲ್ಯ ಮೆರೆಯಿತು. 27ನೇ ನಿಮಿಷದಲ್ಲಿ ಗೋಪಿ ಮತ್ತು 42ನೇ ನಿಮಿಷದಲ್ಲಿ ಸ್ಟಾಲಿನ್‌ ಗೋಲು ದಾಖಲಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.