ADVERTISEMENT

ಐಎಸ್‌ಎಲ್‌ : ಬಿಎಫ್‌ಸಿಗೆ ಜಯದ ತವಕ

ಪಿಟಿಐ
Published 5 ಫೆಬ್ರುವರಿ 2018, 19:21 IST
Last Updated 5 ಫೆಬ್ರುವರಿ 2018, 19:21 IST
ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ ತಂಡದ ಆಟಗಾರರು ಗೆಲುವಿನ ವಿಶ್ವಾಸದಲ್ಲಿದ್ದಾರೆ
ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ ತಂಡದ ಆಟಗಾರರು ಗೆಲುವಿನ ವಿಶ್ವಾಸದಲ್ಲಿದ್ದಾರೆ   

ಚೆನ್ನೈ: ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ವಿರಾಜಮಾನವಾಗಿರುವ ತಂಡಗಳ ಹಣಾಹಣಿಗೆ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಗಲಿದೆ.

ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ‍ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಕಾದಾಡಲಿವೆ.

ಸತತ ಜಯದ ಓಟವನ್ನು ಮುಂದುವರಿಸುವ ಗುರಿಯೊಂದಿಗೆ ಬಿಎಫ್‌ಸಿ ಕಣಕ್ಕೆ ಇಳಿಯಲಿದೆ. ಬೆಂಗಳೂರಿನಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸುವ ಹಂಬಲವೂ ಈ ತಂಡಕ್ಕೆ ಇದೆ.

ADVERTISEMENT

ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದೆ. ಎರಡನೇ ಸ್ಥಾನಲ್ಲಿರುವ ಚೆನ್ನೈಯಿನ್‌ ಬಿಎಫ್‌ಸಿಗಿಂತ ನಾಲ್ಕ ಪಾಯಿಂಟ್‌ಗಳಿಂದ ಹಿಂದೆ ಇದೆ.

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿಯನ್ನು 2-1 ಗೋಲುಗಳಿಂದ ಮಣಿಸಿದ ಚೆನ್ನೈಯಿನ್ ತವರಿನಲ್ಲೂ ಗೆದ್ದರೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದ ಸನಿಹ ತಲುಪಲಿದೆ. ಆದರೆ ಬಲಿಷ್ಠ ತಂಡದ ವಿರುದ್ಧ ಇದು ಸುಲಭ ಸಾಧ್ಯವಲ್ಲ.

‘ನನ್ನ ಪ್ರಕಾರ ನಾಳೆ ಪ್ರಸಕ್ತ ಋತುವಿನ ನಿಜವಾದ ಸವಾಲು ನಮ್ಮ ಮುಂದೆ ಇದೆ. ಮುಂದಿನ 17 ದಿನಗಳಲ್ಲಿ ತಂಡ ಐದು  ಪಂದ್ಯಗಳನ್ನು ಆಡಬೇಕಿದ್ದು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಸಾಧ್ಯವೇ ಎಂಬುದು ಈ ಸಂದರ್ಭದಲ್ಲಿ ನಿರ್ಧಾರವಾಗಲಿದೆ. ತಂಡದ ಆಟಗಾರರೆಲ್ಲರೂ ಫಿಟ್ ಆಗಿರುವುದರಿಂದ ಭರವಸೆ ಹೆಚ್ಚಿದೆ’ ಎಂದು ಚೆನ್ನೈಯಿನ್ ಕೋಚ್‌ ಜಾನ್ ಗ್ರೆಗರಿ ಹೇಳಿದರು.

‘ಕಳೆದ ಪಂದ್ಯದಲ್ಲಿ ಚೆನ್ನೈಯಿನ್ ವಿರುದ್ಧ ಅನುಭವಿಸಿದ ಸೋಲು ನಾಳಿನ ಪಂದ್ಯದ ಮೇಲೆ ಪರಿಣಾಮ ಬೀರಲಾರದು. ತಂಡ ಭರವಸೆಯಿಂದಲೇ ಕಣಕ್ಕೆ ಇಳಿದು ಪೂರ್ಣ ಪಾಯಿಂಟ್‌ಗಳನ್ನು ಗಳಿಸಲಿದೆ’ ಎಂದು ಬಿಎಫ್‌ಸಿ ಕೋಚ್‌ ಅಲ್ಬರ್ಟ್ ರೋಕಾ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.