ADVERTISEMENT

‘ಡಬಲ್‌’ ಸೋಲು; ಭಾರತಕ್ಕೆ ನಿರಾಸೆ

ಫೆಡ್ ಕಪ್‌ ಏಷ್ಯಾ ಒಸಿನಿಯಾ ವಲಯದ ಪಂದ್ಯ: ಮತ್ತೆ ಮಿಂಚು ಹರಿಸಿದ ಅಂಕಿತಾ ರೈನಾ

ಪಿಟಿಐ
Published 8 ಫೆಬ್ರುವರಿ 2018, 20:23 IST
Last Updated 8 ಫೆಬ್ರುವರಿ 2018, 20:23 IST
ಅಂಕಿತಾ ರೈನಾ
ಅಂಕಿತಾ ರೈನಾ   

ನವದೆಹಲಿ: ಮೊದಲ ದಿನ ಅಪೂರ್ವ ಆಟವಾಡಿದ ಅಂಕಿತಾ ರೈನಾ ಗುರುವಾರವೂ ಮಿಂಚು ಹರಿಸಿದರು. ಆದರೆ ಡಬಲ್ಸ್ ವಿಭಾಗದ ಆಟಗಾರರು ಮುಗ್ಗರಿಸಿದ ಕಾರಣ ಭಾರತ ತಂಡ ಫೆಡ್‌ ಕಪ್‌ ಏಷ್ಯಾ ಒಸಿನಿಯಾ ವಲಯದ ‘ಎ’ ಗುಂಪಿನ ಹಣಾಹಣಿಯಲ್ಲಿ ಕಜಕಸ್ತಾನ ವಿರುದ್ಧ ಸೋತಿತು.

ಬುಧವಾರ ಚೀನಾ ವಿರುದ್ಧವೂ ಸೋತ ಭಾರತ ತಂಡ ವಿಶ್ವ ಗುಂಪಿನ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರ ಬಿದ್ದಿತು. ’ಎ’ ಗುಂಪಿನಿಂದ ಚೀನಾ ಅಥವಾ ಕಜಕಸ್ತಾನಕ್ಕೆ ಪ್ಲೇ ಆಫ್ ಹಂತದಲ್ಲಿ ಆಡುವ ಅವಕಾಶವಿದೆ. ಈ ಪಂದ್ಯಗಳು ಏಪ್ರಿಲ್‌ನಲ್ಲಿ ನಡೆಯಲಿವೆ. ಭಾರತ ಮುಂದಿನ ಹಂತದಲ್ಲಿ ಹಾಂಗ್‌ಕಾಂಗ್ ವಿರುದ್ಧ ಸೆಣಸಲಿದ್ದು ಗುಂಪು ಒಂದರಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.

ಮೊದಲ ದಿನದಂತೆ ಗುರುವಾರ ಕೂಡ ಆರಂಭಿಕ ಪಂದ್ಯದಲ್ಲಿ ಕರ್ಮ್‌ನ್‌ಕೌರ್ ಥಂಡಿ ಸೋತು ಭಾರತಕ್ಕೆ ನಿರಾಸೆ ಮೂಡಿಸಿದರು. ಜರೀನಾ ದಿಯಾಸ್ ವಿರುದ್ಧದ ಪಂದ್ಯದಲ್ಲಿ ಅವರು ಚುರುಕಿನ ಆಟ ಆಡಿದರು. ಆದರೆ ಸೋಲಿನ ಸುಳಿಯಿಂದ ಮೇಲೇಳಲು ಅವರಿಗೆ ಸಾಧ್ಯವಾಗಲಿಲ್ಲ.

ADVERTISEMENT

ನಂತರದ ಪಂದ್ಯದಲ್ಲಿ ಎರುರಾಳಿ ತಂಡಕ್ಕೆ ಅಂಕಿತಾ ತಿರುಗೇಟು ನೀಡಿದರು. ಯೂಲಿಯಾ ಪುಟಿನ್ಸೇವ ಎದುರಿನ ಪಂದ್ಯದಲ್ಲಿ ಅಂಕಿತಾ 6–3, 1–6, 6–4ರಿಂದ ಗೆದ್ದು ಭಾರತಕ್ಕೆ ಸಮಬಲ ಗಳಿಸಿಕೊಟ್ಟರು. ಎರಡು ತಾಸು 25 ನಿಮಿಷ ನಡೆದ ಪಂದ್ಯದಲ್ಲಿ ವಿಶ್ವದ 81ನೇ ಕ್ರಮಾಂಕದ ಆಟಗಾರ್ತಿಗೆ ಭಾರಿ ಸವಾಲೊಡ್ಡಿದರು.

ದೈತ್ಯರನ್ನು ಸೋಲಿಸುವ ಆಟಗಾರ್ತಿ ಎಂದೇ ಹೆಸರು ಮಾಡಿರುವ ಪುಟಿನ್ಸೇವ ಭಾರತದ ಆಟಗಾರ್ತಿಯ ಬಲಶಾಲಿ ರಿಟರ್ನ್‌ಗಳಿಗೆ ಉತ್ತರ ನೀಡಲು ವಿಫಲರಾದರು. ಆರಂಭದಲ್ಲಿ ಅತ್ಯುತ್ತಮ ಬ್ಯಾಕ್‌ಹ್ಯಾಂಡ್ ಹೊಡೆತಗಳೊಂದಿಗೆ ಮಿಂಚಿದ ಅಂಕಿತಾ ಆರನೇ ಗೇಮ್‌ನಲ್ಲಿ ಮೊದಲ ಬಾರಿ ಎದುರಾಳಿಯ ಸರ್ವ್ ಮುರಿದರು.

ನಂತರ ಫೋರ್‌ಹ್ಯಾಂಡ್‌ ಮೂಲಕ ಭರ್ಜರಿ ಹೊಡೆತದೊಂದಿಗೆ ಎದುರಾಳಿಯನ್ನು ದಂಗುಬಡಿಸಿದರು. ನಂತರ ಸುಧಾರಿಸಿಕೊಂಡ ಪುಟಿನ್ಸೇವ ಪ್ರಬಲ ಪೈಪೋಟಿ ನೀಡಿದರು. ಇವರಿಬ್ಬರ ಜಿದ್ದಾಜಿದ್ದಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಕೊನೆಗೆ ಸೆಟ್‌ ಅನ್ನು ಭಾರತೀಯ ಆಟಗಾರ್ತಿ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಅಂಕಿತಾಗೆ ಎದುರಾಳಿ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಅಂಕಿತಾ ಮತ್ತೊಮ್ಮೆ ಮಿಂಚಿನ ಆಟ ಆಡಿದರು. ಹೀಗಾಗಿ ಸುಲಭವಾಗಿ ಪಂದ್ಯ ಗೆದ್ದರು.

ಡಬಲ್ಸ್ ಆಟಗಾರರಿಗೆ ನಿರಾಸೆ

ಮಹಿಳೆಯರ ಡಲಬ್ಸ್ ವಿಭಾಗದಲ್ಲಿ ಅನಿತಾ ಮತ್ತು ಪ್ರಾರ್ಥನಾ ತೋಂಬರೆ ನಿರಾಸೆ ಅನುಭವಿಸಿದರು. ದಿಯಾಸ್ ಮತ್ತು ಪುಟಿನ್ಸೆವಾ ಎದುರಿನ ಪಂದ್ಯದಲ್ಲಿ ಅವರು 0–6, 4–6ರಿಂದ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.