ADVERTISEMENT

ತೇವಗೊಂಡ ಮೈದಾನ: ಪಂದ್ಯ ರದ್ದು

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ: ಕರ್ನಾಟಕ, ಹರಿಯಾಣಕ್ಕೆ 2 ಪಾಯಿಂಟ್

ಗಿರೀಶದೊಡ್ಡಮನಿ
Published 10 ಫೆಬ್ರುವರಿ 2018, 20:37 IST
Last Updated 10 ಫೆಬ್ರುವರಿ 2018, 20:37 IST
ಆಲೂರು ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದ ವಿಜಯ ಹಜಾರೆ ಟ್ರೋಫಿಯ ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವಿನ ಪಂದ್ಯ ಮಳೆಯಿಂದ ಕ್ರೀಡಾಂಗಣ ಆಡಲು ಯೋಗ್ಯವಿರದ ಕಾರಣ ರದ್ದಾದ ನಂತರ ಹರಿಯಾಣ ತಂಡದ ನಾಯಕ ಅಮಿತ್‌ ಮಿಶ್ರಾ ಕರ್ನಾಟಕ ತಂಡದ ಆಟಗಾರರೊಂದಿಗ ಮಾತುಕತೆಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಆಲೂರು ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದ ವಿಜಯ ಹಜಾರೆ ಟ್ರೋಫಿಯ ಕರ್ನಾಟಕ ಹಾಗೂ ಹರಿಯಾಣ ತಂಡಗಳ ನಡುವಿನ ಪಂದ್ಯ ಮಳೆಯಿಂದ ಕ್ರೀಡಾಂಗಣ ಆಡಲು ಯೋಗ್ಯವಿರದ ಕಾರಣ ರದ್ದಾದ ನಂತರ ಹರಿಯಾಣ ತಂಡದ ನಾಯಕ ಅಮಿತ್‌ ಮಿಶ್ರಾ ಕರ್ನಾಟಕ ತಂಡದ ಆಟಗಾರರೊಂದಿಗ ಮಾತುಕತೆಯಲ್ಲಿ ತೊಡಗಿರುವುದು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮೈದಾನವು ಒದ್ದೆಯಾಗಿದ್ದರಿಂದ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ಮತ್ತು ಹರಿಯಾಣ ನಡುವಣ ಪಂದ್ಯವು ರದ್ದಾಯಿತು. 

ಬೆಂಗಳೂರು ಹೊರವಲಯದ ಆಲೂರಿನ ಕ್ರೀಡಾಂಗಣದ ಎರಡನೇ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಪಂದ್ಯ ರೆಫರಿ ವಾಲ್ಮೀಕಿ ಬಕ್, ಅಂಫೈರ್‌ಗಳಾದ ವಿನೀತ್ ಕುಲಕರ್ಣಿ ತ್ತು ನಿತಿನ್ ಪಂಡಿತ್ ಅವರು ಪಿಚ್ ಮತ್ತು ಹೊರಾಂಗಣವನ್ನು ಪರಿಶೀಲಿಸಿದರು. ಪಿಚ್ ಬಗ್ಗೆ  ಉತ್ತಮ ಅಭಿಪ್ರಾಯವ್ಯಕ್ತಪಡಿಸಿದ ಅಂಪೈರ್‌ಗಳು ಮೂವತ್ತು ಯಾರ್ಡ್‌ ವೃತ್ತದೊಳಗಿನ ಕೆಲ ಭಾಗದಲ್ಲಿ ನೀರು ನಿಂತಿದೆ. ಒಣಗಿದ ನಂತರ ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಪಿಚ್ ಕ್ಯೂರೇಟರ್ ಶ್ರೀರಾಮ್ ನೇತೃತ್ವದಲ್ಲಿ ಕ್ರೀಡಾಂಗಣದ ಸಿಬ್ಬಂದಿ ಸೂಪರ್ ಸಾಪರ್ ಯಂತ್ರದ ಮೂಲಕ ನೀರು ಎತ್ತಿ ಹೊರಹಾಕುವ ಕಾರ್ಯ ಆರಂಭಿಸಿದರು. 10.30ಕ್ಕೆ ಮತ್ತೊಮ್ಮೆ ಪರಿಶೀಲನೆ ನಡೆಸಿದ ಅಂಪೈರ್‌ಗಳು ಇನ್ನೂ ತೇವ ಇರುವುದರಿಂದ ಫೀಲ್ಡರ್‌ ಗಳು ಜಾರಿ ಬಿದ್ದು ಗಾಯಗೊಳ್ಳುವ ಸಾಧ್ಯತೆ ಇದೆ ಇನ್ನೂ ಕೆಲಹೊತ್ತು ಕಾಯು ವುದಾಗಿ ತಿಳಿಸಿದರು. ಹಸಿ ಹುಲ್ಲನ್ನು ಕತ್ತರಿಸಿದ ಸಿಬ್ಬಂದಿಯು ಸ್ಟಾರ್‌ಡಸ್ಟ್‌ (ಪುಡಿಮಣ್ಣು) ಹಾಕಿದರು.

ADVERTISEMENT

ಆ ನಂತರ ಹರಿಯಾಣ ತಂಡದ ನಾಯಕ ಅಮಿತ್ ಮಿಶ್ರಾ ಮತ್ತು ಕರ್ನಾಟಕ ತಂಡದ ನಾಯಕ ಆರ್. ವಿನಯಕುಮಾರ್ ಅವರು ಕೂಡ ಅಂಪೈರ್‌ಗಳೊಂದಿಗೆ ಮೈದಾನ ಪರಿಶೀಲನೆ ನಡೆಸಿದರು. ಆದರೂ ಆಟ ಆರಂಭವಾಗಲಿಲ್ಲ.

ಅದರ ನಂತರವೂ ಮೂರು ಬಾರಿ ಪರಿಶೀಲನೆ ನಡೆಸಿದ ರೆಫರಿ ಮತ್ತು ಅಂಪೈರ್‌ಗಳು ಮಧ್ಯಾಹ್ನ 1.30ರ ಸುಮಾರಿಗೆ ಪಂದ್ಯ ರದ್ದು ಮಾಡಿದರು.  ಎರಡೂ ತಂಡಗಳಿಗೆ ತಲಾ 2 ಪಾಯಿಂಟ್‌ಗಳನ್ನು ನೀಡಲಾಯಿತು. ಟೂರ್ನಿಯ ಮೊದಲ ಎರಡು ಪಂದ್ಯ ಗಳಲ್ಲಿ ಗೆದ್ದಿದ್ದ ಕರ್ನಾಟಕ ತಂಡದ ಖಾತೆಯಲ್ಲಿ ಈಗ 10 ಅಂಕಗಳಿವೆ. ಹರಿಯಾಣ ತಂಡದ ಖಾತೆಯಲ್ಲಿ ಆರು ಅಂಕಗಳಿವೆ.

ಮಧ್ಯಾಹ್ನದವರೆಗೂ ಮೈದಾನದಲ್ಲಿದ್ದ ಹರಿಯಣ ತಂಡದ ಆಟಗಾರರು ಫಿಟ್‌ನೆಸ್‌ ವ್ಯಾಯಾಮಗಳು, ಫುಟ್‌ ಬಾಲ್ ಮತ್ತು ಚೇರ್ ಗೇಮ್‌ಗಳನ್ನು ಆಡಿದರು. 3.30ರ ಹೊತ್ತಿಗೆ ಹೋಟೆ ಲ್‌ಗೆ ಮರಳಿದರು.  ಆತಿಥೇಯ ತಂಡದ ಆಟಗಾರರು 1.45ರ ಸುಮಾರಿಗೆ ಮೈದಾನದಿಂದ ತೆರಳಿದರು.

ಸಂಕ್ಷಿಪ್ತ ಸ್ಕೋರು

ಆಲೂರು (1)

ರೈಲ್ವೆಸ್: 43.1 ಓವರ್‌ಗಳಲ್ಲಿ 161 (ಅಭಿಷೇಕ್ ಕುಮಾರ್ ಯಾದವ್ 27, ಅವಿನಾಶ್ ಯಾದವ್ 30, ಜಿತುಮೋನಿ ಕಲಿಟಾ 23ಕ್ಕೆ2, ಅರೂಪ್ ದಾಸ್ 41ಕ್ಕೆ3).

ಅಸ್ಸಾಂ: 39.3 ಓವರ್‌ಗಳಲ್ಲಿ 126 (ಅಮಿತ್ ಸಿನ್ಹಾ 39, ಅಬು ನಚೀಮ್ ಅಹಮದ್ 26, ಅಮಿತ್ ಮಿಶ್ರಾ 21ಕ್ಕೆ5, ಕರಣ್ ಠಾಕೂರ್ 25ಕ್ಕೆ2, ಅಂಕಿತ್ ಯಾದವ್ 24ಕ್ಕೆ3)

ಫಲಿತಾಂಶ: ರೈಲ್ವೆ ತಂಡಕ್ಕೆ 35 ರನ್‌ ಜಯ.

**

ಆಲೂರು (3)

ಬರೋಡಾ: 21 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 (ಸ್ವಪ್ನಿಲ್ ಸಿಂಗ್ 33, ವಿಷ್ಣು ಸೋಳಂಕಿ ಔಟಾಗದೆ 77, ಸಿದ್ಧಾರ್ಥ್ ಕೌಲ್ 36ಕ್ಕೆ3. ಸಂದೀಪ್ ಶರ್ಮಾ 25ಕ್ಕೆ2),

ಪಂಜಾಬ್: 20.5 ಓವರ್‌ಗಳಲ್ಲಿ 142 (ಯುವರಾಜ್ ಸಿಂಗ್ 51, ಅತೀಥ್ ಶೇಟ್ 25ಕ್ಕೆ2, ಲಕ್ಮನ್ ಮರಿವಾಲಾ 32ಕ್ಕೆ2, ರಿಶಿ ಅರೋತೆ 16ಕ್ಕೆ2, ಸ್ವಪ್ನಿಲ್ ಸಿಂಗ್ 4ಕ್ಕೆ2)

ಫಲಿತಾಂಶ: ಬರೋಡಾ ತಂಡಕ್ಕೆ 25 ರನ್‌ಗಳ ಜಯ.

**

ಮೂರನೇ ಮೈದಾನದಲ್ಲಿ ನಡೆದ ಪಂದ್ಯ

ಆಲೂರು ಕ್ರೀಡಾಂಗಣದ ಮೂರನೇ ಮೈದಾನವೂ ಹಸಿಯಾಗಿದ್ದರಿಂದ ಬರೋಡಾ ಮತ್ತು ಪಂಜಾಬ್ ನಡುವಣ ಪಂದ್ವಕ್ಕೂ ತಡೆಯುಂಟಾಯಿತು. ಆದರೆ, ಮಧ್ಯಾಹ್ನ 21 ಓವರ್‌ಗಳ ಪಂದ್ಯವನ್ನು ಆಡಿಸಲಾಯಿತು.

ಕರ್ನಾಟಕದ ಪಂದ್ಯ ನೋಡಲು ಬಂದಿದ್ದ ಪ್ರೇಕ್ಷಕರು ಮೂರನೇ ಮೈದಾನಕ್ಕೆ ಧಾವಿಸಿದರು. ಅಲ್ಲಿ ಅವರಿಗೆ ಚುಟುಕು ಕ್ರಿಕೆಟ್‌ನ ಮನರಂಜನೆ ಲಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡದ ವಿಷ್ಣು ಸೋಳಂಖಿ (77 ರನ್) ಬೌಂಡರಿಗಳ ಮಳೆ ಸುರಿಸಿದರು. ಇದರಿಂದಾಗಿ ತಂಡವು 21 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 ರನ್‌ಗಳನ್ನು ಗಳಿಸಿತು.

ನಂತರ ಪ್ರೇಕ್ಷಕರ ನೆಚ್ಚಿನ ಆಟಗಾರ, ಪಂಜಾಬ್‌ ತಂಡದ ಯುವರಾಜ್ ಸಿಂಗ್ ಅಬ್ಬರಿಸಿದರು. ಯುವಿ (51 ರನ್) ಅರ್ಧಶತಕ ಗಳಿಸಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ. ಅದರಿಂದಾಗಿ ಪಂಜಾಬ್ ತಂಡವು 20.5 ಓವರ್‌ಗಳಲ್ಲಿ 142 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. 25 ರನ್‌ಗಳ ಅಂತರದಿಂದ ಸೋತಿತು.

ಪಂಜಾಬ್ ತಂಡದ ಯುವರಾಜ್ ಸಿಂಗ್ ಮತ್ತು ಬರೋಡಾ ತಂಡದಲ್ಲಿರುವ ಯೂಸುಫ್ ಪಠಾಣ್ ಅವರ ಆಟವನ್ನು ನೋಡಿದರು. ಆಲೂರು (3): ಬರೋಡಾ: 21 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 (ಸ್ವಪ್ನಿಲ್ ಸಿಂಗ್ 33, ವಿಷ್ಣು ಸೋಳಂಕಿ ಔಟಾಗದೆ 77, ಸಿದ್ಧಾರ್ಥ್ ಕೌಲ್ 36ಕ್ಕೆ3. ಸಂದೀಪ್ ಶರ್ಮಾ 25ಕ್ಕೆ2), ಪಂಜಾಬ್: 20.5 ಓವರ್‌ಗಳಲ್ಲಿ 142 (ಯುವರಾಜ್ ಸಿಂಗ್ 51, ಅತೀಥ್ ಶೇಟ್ 25ಕ್ಕೆ2, ಲಕ್ಮನ್ ಮರಿವಾಲಾ 32ಕ್ಕೆ2, ರಿಶಿ ಅರೋತೆ 16ಕ್ಕೆ2, ಸ್ವಪ್ನಿಲ್ ಸಿಂಗ್ 4ಕ್ಕೆ2) ಫಲಿತಾಂಶ: ಬರೋಡಾ ತಂಡಕ್ಕೆ 25 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.