ADVERTISEMENT

ನಾಳೆ ನೂತನ ಒಲಿಂಪಿಕ್ ಭವನ ಉದ್ಘಾಟನೆ

ಕಂಠೀರವ ಕ್ರೀಡಾಂಗಣದಲ್ಲಿ 23ರಂದು ಲೋಕಾರ್ಪಣೆ

ಪಿಟಿಐ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಒಲಿಂಪಿಕ್ ಭವನದ ಉದ್ಘಾಟನೆ ಇದೇ 23ರಂದು ನಡೆಯಲಿದೆ.

ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಗಣದ ಬಳಿ ನಿರ್ಮಿಸಲಾಗಿರುವ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 5.30ಕ್ಕೆ ಉದ್ಘಾಟಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇದು ದೀರ್ಘ ಕಾಲದ ಕನಸಾಗಿತ್ತು. ಭವನ ನಿರ್ಮಾಣಕ್ಕೆ ಸ್ಥಳವನ್ನು ರಾಜ್ಯ ಸರ್ಕಾರ ಒದಗಿಸಿತ್ತು. ಸರ್ಕಾರದಿಂದ ಅನುದಾನ ಪಡೆಯದೆ ಸ್ವಂತ ಮೂಲದಿಂದ ಹಣ ಸಂಗ್ರಹಿಸಿ ಕಟ್ಟಡ ನಿರ್ಮಿಸಲಾಗಿದೆ. ಇನ್ನು ಮುಂದೆ ಸಂಸ್ಥೆಯ ಕಾರ್ಯಕ್ರಮಗಳು ಇಲ್ಲೇ ನಡೆಯಲಿವೆ’ ಎಂದು ವಿವರಿಸಿದರು.

ADVERTISEMENT

‘ಕಚೇರಿಗಳು, ಕ್ರೀಡಾ ಗ್ರಂಥಾಲಯ, ಚಿತ್ರಗಳ ಸಂಗ್ರಹ, ಸಭಾಂಗಣ, ಪ್ರದರ್ಶನ ಕೊಠಡಿ ಇತ್ಯಾದಿ ಇಲ್ಲಿ ಇವೆ. ಪ್ರಶಸ್ತಿ ಪ್ರದಾನ ಸಮಾರಂಭ, ವಿಚಾರ ಸಂಕಿರಣಗಳನ್ನು ಇಲ್ಲೇ ಆಯೋಜಿಸಬಹುದಾಗಿದೆ. ರಾಜ್ಯದ ಒಲಿಂಪಿಯನ್‌ಗಳು, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು’ ಎಂದು ಅವರು ತಿಳಿಸಿದರು.

‘ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಪ್ರಮೋದ್ ಮದ್ವರಾಜ್‌, ರೋಷನ್ ಬೇಗ್‌, ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರೀಂದರ್‌ ಬಾತ್ರಾ, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಮತ್ತಿತರರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ವೆಬ್‌ಸೈಟ್‌ಗೆ ಚಾಲನೆ

ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಸಂಸ್ಥೆಯ ವೆಬ್‌ಸೈಟ್‌ಗೆ (www.karnatakaolympicassociation.com) ಚಾಲನೆ ನೀಡಲಾಗುವುದು. ಇದರಲ್ಲಿ ರಾಜ್ಯದ ಕ್ರೀಡಾಪಟುಗಳ ಸಮಗ್ರ ಮಾಹಿತಿ ಸಿಗಲಿದೆ. ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳ ಫಲಿತಾಂಶಗಳನ್ನು ಅಪ್‌ಲೋಡ್ ಮಾಡಲಾಗುವುದು ಎಂದು ಗೋವಿಂದರಾಜ್ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಅನಂತರಾಜು ಮತ್ತು ಜಂಟಿ ಕಾರ್ಯದರ್ಶಿ ಆರ್‌.ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.