ADVERTISEMENT

ಬೆಂಗಳೂರು ವಿವಿ ಹಾಕಿ ತಂಡಕ್ಕೆ ಶೂ: ಭರವಸೆ

ಪಿಟಿಐ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಹಾಕಿ ತಂಡದವರು ಹೊಸ ಬೂಟುಗಳುನ್ನು ತೊಟ್ಟು ಅಂಗಣಕ್ಕೆ ಇಳಿಯುವ ಕಾಲ ಸಮೀಪಿಸಿದೆ.

ಗುಣಮಟ್ಟದ ಬೂಟುಗಳು ಬೇಕು ಎಂಬ ಆಟಗಾರರ ಮನವಿಗೆ ಸ್ಪಂದಿಸಿರುವ ವಿವಿ ಆಡಳಿತ ಈ ಬೇಡಿಕೆ ಈಡೇರಿಸಲು ಮುಂದಾಗಿದೆ. ಈ ವಿಷಯವನ್ನು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಟಿ.ಲಿಂಗರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಾಕಿ ತಂಡದವರು ಅನೇಕ ವರ್ಷಗಳಿಂದ ಗುಣಮಟ್ಟದ ಶೂ ಬೇಕು ಎಂದು ಬೇಡಿಕೆ ಇರಿಸುತ್ತ ಬಂದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ದಕ್ಷಿಣ ವಲಯ ಅಂತರ ವಿವಿ ಟೂರ್ನಿಯ ಪ್ರಶಸ್ತಿ ಗೆದ್ದು ಬಂದ ನಂತರ ಈ ಆಗ್ರಹ ತೀವ್ರಗೊಂಡಿತ್ತು. ಆಗ ಆಡಳಿತದಿಂದ ಭರವಸೆ ಲಭಿಸಿತ್ತು. ಆದರೆ ಅದು ಈಡೇರಲಿಲ್ಲ.

ADVERTISEMENT

ಈಗ ತಂಡ ಮತ್ತೊಂದು ಸಾಧನೆ ಮಾಡಿದೆ. ದಕ್ಷಿಣ ವಲಯ ಟೂರ್ನಿಯ ಪ್ರಶಸ್ತಿ ಗೆದ್ದ ತಂಡ ದೆಹಲಿಯಲ್ಲಿ ಫೆ. 19ರಂದು ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿವಿ ಟೂರ್ನಿಯಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫೈನಲ್‌ನಲ್ಲಿ ಈ ತಂಡ ಜಬಲ್‌ಪುರದ ವಿ.ಬಿ.ಎಸ್‌.ಪಿ ವಿಶ್ವವಿದ್ಯಾಲಯ ತಂಡವನ್ನು 2–0ಯಿಂದ ಮಣಿಸಿತ್ತು. ಆದರೆ ತಂಡ ಹಳೆಯ ಬೂಟುಗಳನ್ನು ತೊಟ್ಟುಕೊಂಡೇ ಈ ಟೂರ್ನಿಯಲ್ಲಿ ಆಡಿತ್ತು ಎಂಬ ದೂರು ಕೇಳಿಬಂದಿತ್ತು.

ಬುಧವಾರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಂಡವನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶೂ ಮತ್ತು ಜರ್ಸಿ ಒದಗಿಸುವ ಭರವಸೆಯನ್ನು ಕುಲಪತಿಯವರು ನೀಡಿದ್ದಾರೆ.

‘ಅನೇಕ ವರ್ಷಗಳಿಂದ ಈ ಬೇಡಿಕೆ ಇತ್ತು. ಆದರೆ ಅದನ್ನು ಈಡೇರಿಸಲು ಆಗಿರಲಿಲ್ಲ. ಈಗ ತಂಡ ಮತ್ತೆ ಉತ್ತಮ ಸಾಧನೆ ಮಾಡಿದೆ.

ಇದಕ್ಕೆ ಖುಷಿಪಟ್ಟ ಕುಲಪತಿಯವರೇ ಇಂದು ಭರವಸೆ ನೀಡಿದ್ದು ಕೆಲವೇ ದಿನಗಳಲ್ಲಿ ಹೊಸ ಶೂ ಮುತ್ತು ಜೆರ್ಸಿ ಕೈಸೇರಲಿದೆ’ ಎಂದು ಲಿಂಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.