ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ನವದೆಹಲಿ: ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಅವರ ನಿವೃತ್ತಿ ತಂಡಕ್ಕೆ ದೊಡ್ಡ ನಷ್ಟವಾಗಿರಬಹುದು. ಆದರೆ ಅದು ತೀರಾ ಅಚ್ಚರಿಯ ನಡೆಯೇನೂ ಆಗಿರಲಿಲ್ಲ. ದೀರ್ಘ ಮಾದರಿಯಲ್ಲಿ ವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ಸಮಯದಲ್ಲೇ ತಮ್ಮ ಎಲ್ಲ ನಡೆಗಳ ಮೇಲೆ ಅತಿಯಾದ ಗಮನ ನೀಡುತ್ತಿದ್ದುದು ಅವರ ಮೇಲೆ ಒತ್ತಡ ಹೇರಿರಲು ಸಾಕು.
ತಮಗಿರುವ ಬದ್ಧತೆಯಿಂದ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಜೀವಂತವಾಗಿಡಲು ಏಕಾಂಗಿಯಾಗಿ ಹೋರಾಡಿದ ಶ್ರೇಯಸ್ಸು ಅವರದು. ಈಗ ಏಕದಿನ ಕ್ರಿಕೆಟ್‌ಗೆ ಮಾತ್ರ ಭಾರತದ ಸೂಪರ್ ಸ್ಟಾರ್ ಆಟಗಾರ ಲಭ್ಯವಿದ್ದಾರೆ. ಟಿ20 ಅಬ್ಬರದಲ್ಲಿ ಏದುಸಿರು ಬಿಡುತ್ತಿರುವ ಈ ಮಾದರಿಗೆ ಅವರು ಜೀವಕಳೆ ನೀಡಬಹುದೆಂಬ ನಿರೀಕ್ಷೆಯಿದೆ.
ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಗೆ ಮೊದಲು ಅವರ ಮುಂದೆ ಸವಾಲುಗಳಿದ್ದವು. ಆದರೆ ಅದಕ್ಕೆ ಮೊದಲೇ ಭಾರತದ ಯಶಸ್ವಿ ಆಟಗಾರನ ಟೆಸ್ಟ್ ವಿದಾಯ ಬಹುತೇಕ ಹತ್ತಿರವಾಗಿತ್ತು. ‘ಇದು ಸರಿಯಾದ ನಿರ್ಧಾರ. ಒಂದಿಷ್ಟೂ ವಿಷಾದವಿಲ್ಲದೇ, ಮೊಗದಲ್ಲಿ ಮಂದಹಾಸದೊಡನೆ ಹೊರನಡೆಯುತ್ತಿದ್ದೇನೆ’ ಎಂದು ಕೊಹ್ಲಿ ನಿವೃತ್ತಿ ನಿರ್ಧಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಟಿಯಿಲ್ಲದ ಫಿಟ್ನೆಸ್, ಐಪಿಎಲ್‌ನಲ್ಲಿ ತೋರಿದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಪರಿಗಣಿಸಿದರೆ, ಅವರು ಕಡೇಪಕ್ಷ ಇನ್ನೊಂದು ಋತುವಿಗೆ ಆಡಬಹುದಿತ್ತು.
ಆದರೆ ನಿರೀಕ್ಷೆಯ ಭಾರ ಅವರನ್ನು ಕಾಡಿದೆ ಎಂಬುದು ಇತ್ತೀಚಿನ ಆರ್‌ಸಿಬಿಯ ಪಾಡ್‌ಕಾಸ್ಟ್‌ನಲ್ಲಿ ಅವರ ಮಾತುಗಳಿಂದ ವ್ಯಕ್ತವಾಗಿತ್ತು. ಟಿ20 ಮತ್ತು ಟೆಸ್ಟ್‌ಗಳಲ್ಲಿ ಭಾರತ ತಂಡದ ನಾಯಕತ್ವ ತೊರೆಯುವ ಮನದಲ್ಲಿ ಏನು ಸುಳಿದಿತ್ತು ಎಂಬ ಪ್ರಶ್ನೆಗೆ ‘ಒಂದು ಹಂತದಲ್ಲಿ ನನ್ನ ಮೇಲಿದ್ದ ಅತಿಯದ ಗಮನವನ್ನು ನಿಭಾಯಿಸುವುದು ತುಂಬಾ ಕಠಿಣವೆನಿಸಿತ್ತು. ನಾನು 7–8 ವರ್ಷ ಭಾರತ ತಂಡದ ನಾಯಕನಾಗಿದ್ದೆ. ಆರ್‌ಸಿಬಿಗೆ 9 ವರ್ಷ ನಾಯಕನಾಗಿದ್ದೆ. ಪ್ರತಿ ಬಾರಿ ಆಡಲು ಇಳಿಯುವಾಗ ನನ್ನ ಮೇಲೆ ನಿರೀಕ್ಷೆಯ ಭಾರಗಳಿರುತ್ತಿದ್ದವು’ ಎಂದು ಅವರು ಹೇಳಿದ್ದರು.
‘ದೀರ್ಘ ಅವಧಿಗೆ ಎಲ್ಲವನ್ನೂ ಒಟ್ಟೊಟ್ಟಿಗೆ ನಿರ್ವಹಿಸುವುದು ದೊಡ್ಡ ಸವಾಲು. ಯಾವಾಗ ಇದು ಕೈಮೀರುತ್ತಿದೆ ಎಂದು ಮನಸ್ಸಿಗೆ ಬಂತೊ, ಆಗ ನಾಯಕತ್ವ ತ್ಯಜಿಸಿದೆ. ನಿರಾಳನಾಗಿದ್ದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.