ADVERTISEMENT

ಬೂಮ್ರಾ ಆಲ್‌ರೌಂಡ್ ಆಟದ ಗಮ್ಮತ್ತು: ಪ್ರಥಮ ದರ್ಜೆಯಲ್ಲಿ ಚೊಚ್ಚಲ ಅರ್ಧಶತಕ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ’ಡೆತ್ ಓವರ್ ಪರಿಣತ‘

ಪಿಟಿಐ
Published 11 ಡಿಸೆಂಬರ್ 2020, 16:20 IST
Last Updated 11 ಡಿಸೆಂಬರ್ 2020, 16:20 IST
ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ
ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ   

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಇಡೀ ದಿನ ಜಸ್‌ಪ್ರೀತ್ ಬೂಮ್ರಾ ಆಲ್‌ರೌಂಡ್ ಆಟವೇ ಕಂಗೊಳಿಸಿತು.

ಇಲ್ಲಿ ಆಸ್ಟ್ರೇಲಿಯಾ ಎ ಎದುರಿನ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಜಸ್‌ಪ್ರೀತ್ ಬೂಮ್ರಾ (ಔಟಾಗದೆ 55; 57ಎಸೆತ)ಬೌಲಿಂಗ್‌ನಲ್ಲಿ ತಮ್ಮ ನೈಜ ಸಾಮರ್ಥ್ಯ ಮೆರೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 48.3 ಓವರ್‌ಗಳಲ್ಲಿ 194 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ಎ ತಂಡವು 32.2 ಓವರ್‌ಗಳಲ್ಲಿ 108 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶಮಿ (29ಕ್ಕೆ3) ಮತ್ತು ನವದೀಪ್ ಸೈನಿ (19ಕ್ಕೆ3) ಎದುರಾಳಿ ತಂಡದ ಬ್ಯಾಟಿಂಗ್‌ ಬಲಕ್ಕೆ ಪೆಟ್ಟುಕೊಟ್ಟರು.

ADVERTISEMENT

10ನೇ ಕ್ರಮಾಂಕದಲ್ಲಿ ಬೂಮ್ರಾ ಬ್ಯಾಟಿಂಗ್‌ಗೆ ಬಂದಾಗ ತಂಡದ ಮೊತ್ತವು 125 ರನ್ ಕೂಡ ದಾಟಿರಲಿಲ್ಲ. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ (22;34ಎ, 2ಬೌಂ, 1ಸಿ) 71 ರನ್‌ಗಳನ್ನು ಸೇರಿಸಿದರು.

ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್, ನಾಯಕ ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ ಅವರಂತಹ ಬ್ಯಾಟ್ಸ್‌ಮನ್‌ಗಳು ಒಂದಂಕಿ ದಾಟದ ಪಿಚ್‌ನಲ್ಲಿ ಬೂಮ್ರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು.

ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಬೂಮ್ರಾ ಆಟವು ಮನಸೆಳೆಯುವಂತಿತ್ತು. ಪಕ್ಕಾ ಪರಿಣತ ಬ್ಯಾಟ್ಸ್‌ಮನ್‌ ಮಾದರಿಯಲ್ಲಿ ಅವರು ಪ್ರಯೋಗಿಸಿದ ಡ್ರೈವ್‌ಗಳಿಗೆ ಫೀಲ್ಡರ್‌ಗಳು ಬೆರಗಾದರು. ತಾವೆದುರಿಸಿದ 54ನೇ ಎಸೆತದಲ್ಲಿ ಫೈನ್‌ಲೆಗ್‌ಗೆ ಸಿಕ್ಸರ್ ಎತ್ತಿ ಅರ್ಧಶತಕ ಪೂರೈಸಿದರು.

ನಂತರದ ಓವರ್‌ನಲ್ಲಿ ಸ್ವಿಪ್ಸನ್ ಬೌಲಿಂಗ್‌ನಲ್ಲಿ ಸಿರಾಜ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಸಿರಾಜ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು.

ಬೌಲಿಂಗ್‌ನಲ್ಲಿಯೂ ಮಿಂಚಿದ ಬೂಮ್ರಾ ತಮ್ಮ ಮೊದಲ ಓವರ್‌ನಲ್ಲಿಯೇ ಜೋ ಬರ್ನ್ಸ್ ವಿಕೆಟ್ ಗಳಿಸಿದರು. 24ನೇ ಓವರ್‌ನಲ್ಲಿ ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಜ್ಯಾಕ್ ವೈಲ್ಡ್‌ಮುತ್ ವಿಕೆಟ್ ಕೂಡ ಕಬಳಿಸಿದರು.

ಸ್ಪಿನ್ನರ್‌ಗಳಿರದ ತಂಡದಲ್ಲಿ ನಾಲ್ವರು ಮಧ್ಯಮವೇಗಿಗಳು ಸೇರಿ ಎದುರಾಳಿ ತಂಡದ ಇನಿಂಗ್ಸ್‌ ಗೆ ತೆರೆ ಎಳೆದರು. ಸಿರಾಜ್ ಕೂಡ ಒಂದು ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಕುಲದೀಪ್ ಯಾದವ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ವಿಶ್ರಾಂತಿ ಪಡೆದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಭಾರತ: 48.3 ಓವರ್‌ಗಳಲ್ಲಿ 194 (ಪೃಥ್ವಿ ಶಾ 40, ಶುಭಮನ್ ಗಿಲ್ 43, ಜಸ್‌ಪ್ರೀತ್ ಬೂಮ್ರಾ ಔಟಾಗದೆ 55, ಮೊಹಮ್ಮದ್ ಸಿರಾಜ್ 22, ಸೀನ್ ಅಬಾಟ್ 46ಕ್ಕೆ3, ಜ್ಯಾಕ್ ವೈಲ್ಡರ್‌ಮುತ್ 13ಕ್ಕೆ3), ಆಸ್ಟ್ರೇಲಿಯಾ ಎ: 32.2 ಓವರ್‌ಗಳಲ್ಲಿ 108 (ಮಾರ್ಕಸ್ ಹ್ಯಾರಿಸ್ 26, ಅಲೆಕ್ಸ್ ಕ್ಯಾರಿ 32, ಮೊಹಮ್ಮದ್ ಶಮಿ 29ಕ್ಕೆ3, ಜಸ್‌ಪ್ರೀತ್ ಬೂಮ್ರಾ 33ಕ್ಕೆ2, ನವದೀಪ್ ಸೈನಿ 19ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.