ADVERTISEMENT

ಭಾರತ ತಂಡದ ಕ್ರಿಕೆಟ್‌ ಕಿಟ್‌ ಪ್ರಾಯೋಜಕತ್ವ ಎಂಪಿಎಲ್‌ಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 14:01 IST
Last Updated 17 ನವೆಂಬರ್ 2020, 14:01 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಟಗಾರರ ಕಿಟ್‌ಗೆ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಪ್ರಾಯೋಜಕತ್ವ ನೀಡಲಿದೆ.

ಪುರುಷರ, ಮಹಿಳೆಯರ ಮತ್ತು 19 ವರ್ಷದೊಳಗಿನವರ ತಂಡಗಳಿಗೆ ಈ ಪ್ರಾಯೋಜಕತ್ವ ನೀಡಲಾಗುತ್ತಿದೆ. ಈ ಹಿಂದೆ ನೈಕಿ ಸಂಸ್ಥೆಯ ಪ್ರಾಯೋಜಕತ್ವ ಇತ್ತು. 2016ರಿಂದ 2020 ರವರೆಗೆ ಒಟ್ಟು ಐದು ವರ್ಷಗಳ ಪ್ರಾಯೋಜಕತ್ವಕ್ಕೆ ನೈಕಿ ₹ 370 ಕೋಟಿ ನೀಡಿತ್ತು.

ನವೆಂಬರ್ 2ರಂದು ನಡೆದಿದ್ದ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಈ ಪ್ರಾಯೋಜಕತ್ವ ಕುರಿತು ನಿರ್ಧರಿಸಲಾಯಿತು.

ADVERTISEMENT

ಎಂಪಿಎಲ್ ಆಟಗಾರರ ಪೋಷಾಕು ಮತ್ತು ಸಲಕರಣೆಗಳಿಗೆ ನೀಡಲಿದೆ. ಇ ಸ್ಪೋರ್ಟ್ಸ್‌ ಸಂಸ್ಥೆಯಾಗಿರುವ ಎಂಪಿಎಲ್ ಸ್ಪೋರ್ಟ್ಸ್ ಬ್ರ್ಯಾಂಡ್ ಕೂಡ ಹೊಂದಿದೆ. ಕ್ರಿಕೆಟ್ ಸಲಕರಣೆಗಳು, ಪೋಷಾಕುಗಳು, ಮುಖಗವಸು, ಮಣಿಕಟ್ಟಿನ ಬ್ಯಾಂಡ್, ಬೂಟು, ಚಪ್ಪಲಿ, ತಲೆಯ ಪಟ್ಟಿಗಳ ವಿತರಕ ಸಂಸ್ಥೆಯಾಗಿದೆ.

2023ರ ಡಿಸೆಂಬರ್‌ವರೆಗೆ ಬಿಸಿಸಿಐನೊಂದಿಗೆ ಎಂಪಿಎಲ್ ಒಪ್ಪಂದ ಮಾಡಿಕೊಂಡಿದೆ. ಇದೇ ತಿಂಗಳು ಆರಂಭವಾಗಲಿರುವ ಭಾರತ–ಆಸ್ಟ್ರೇಲಿಯಾ ನಡುವಣ ಸರಣಿಯೊಂದಿಗೆ ಈ ಒಪ್ಪಂದ ಜಾರಿಗೆ ಬರುತ್ತದೆ.

ಕ್ರಿಕೆಟಿಗರು ಧರಿಸುವ ಎಲ್ಲ ಪೋಷಾಕುಗಳನ್ನು ಎಂಪಿಎಲ್ ಸ್ಪೋರ್ಟ್ಸ್‌ನಿಂದಲೇ ವಿನ್ಯಾಸಗೊಳಿಸಲಾಗಿದೆ.

’ತಂಡದ ಕಿಟ್‌ ಗೆ ಎಂಪಿಎಲ್ ಪ್ರಾಯೋಜಕತ್ವದಿಂದ ಮೌಲ್ಯವರ್ಧನೆಯಾಗಲಿದೆ. ಲಕ್ಷಾಂತರ ಅಭಿಮಾನಿಗಳಿಗೆ ಪ್ರಾಯೋಜಕರು ತಲುಪಲಿದ್ದಾರೆ‘ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಎಂಪಿಎಲ್ ಭಾರತ ತಂಡದ ಜೆರ್ಸಿ ಅಲ್ಲದೇ, ತಂಡದ ಉತ್ಪನ್ನಗಳನ್ನೂ ಬಿಕರಿ ಮಾಡಲಿದೆ.

’ಕ್ರಿಕೆಟ್ ಅಭಿಮಾನಿಗಳಿಗೆ ಉತ್ಕೃಷ್ಠ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ತಂಡದ ಪೋಷಾಕುಗಳು ಮತ್ತಿತರ ಸಲಕರಣೆಗಳನ್ನು ಅಭಿಮಾನಿಗಳೂ ಸುಲಭವಾಗಿ ಕೊಳ್ಳಬಹುದು‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಎಂಪಿಎಲ್ ಸಂಸ್ಥೆಯು ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳೊಂದಿಗೆ ಒಪ್ಪಂದ ಹೊಂದಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದು ತಂಡ, ಐರ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಯುಎಇ ಕ್ರಿಕೆಟ್ ಮಂಡಳಿಯೊಂದಿಗೂ ಒಪ್ಪಂದ ಹೊಂದಿದೆ.

’ಭಾರತದಲ್ಲಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಕ್ರಿಕೆಟ್ ಸಂಬಂಧಿತ ಉತ್ಪನ್ನಗಳಿಗೆ ಇದೊಂದು ದೊಡ್ಡ ಮಾರುಕಟ್ಟೆ. ಬಿಸಿಸಿಐ ಒಪ್ಪಂದದಿಂದ ನಾವು ಹೆಚ್ಚು ಜನರನ್ನು ತಲುಪುವ ನಿರೀಕ್ಷೆ ಇದೆ‘ ಎಂದು ಎಂಪಿಎಲ್ ಉಪಾಧ್ಯಕ್ಷ ಅಭಿಷೇಕ್ ಮಾಧವನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.