ADVERTISEMENT

ಐಪಿಎಲ್‌ ಪ್ರಸಾರ ಹಕ್ಕುಗಳಿಂದ ₹ 37.5 ಸಾವಿರ ಕೋಟಿ ಆದಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 12:58 IST
Last Updated 21 ಅಕ್ಟೋಬರ್ 2021, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ಐದು ವರ್ಷದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಳ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳಿಂದ ಬಿಸಿಸಿಐಗೆ ₹ 37,550 ಕೋಟಿ ಆದಾಯ ಲಭಿಸುವ ನಿರೀಕ್ಷೆ ಇದೆ.

ಪ್ರಸ್ತುತ 2018ರಿಂದ 2022ರವರೆಗೆ ಸ್ಟಾರ್‌ ಇಂಡಿಯಾ ಐಪಿಎಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಇದರಿಂದ ₹ 16,347.50 ಕೋಟಿಯ ಆದಾಯವನ್ನು ಪಡೆಯಲಿದೆ.

ಆದರೆ, ಮುಂದಿನ ವರ್ಷ ಟೂರ್ನಿಯಲ್ಲಿ ಮತ್ತೆರಡು ಹೊಸ ತಂಡಗಳು ಸೇರ್ಪಡೆಗೊಳ್ಳಲಿವೆ. ಆದ್ದರಿಂದ 2023ರಿಂದ 2027ರವರೆಗಿನ ಹಕ್ಕುಗಳಿಂದ ದುಪ್ಪಟ್ಟು ಆದಾಯ ಬರುವ ನಿರೀಕ್ಷೆಯಲ್ಲಿ ಮಂಡಳಿ ಇದೆ.

ADVERTISEMENT

‘ಅಮೆರಿಕ ಮೂಲದ ಕಂಪೆನಿಯೊಂದು ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಪಡೆಯಲು ಆಸಕ್ತಿ ತೋರುತ್ತಿದೆ. 2022ರಿಂದ ಒಟ್ಟು ಹತ್ತು ತಂಡಗಳು ಕಣಕ್ಕಿಳಿಯುವುದರಿಂದ ಪಂದ್ಯಗಳ ಸಂಖ್ಯೆಯು 74ಕ್ಕೆ ಏರಲಿವೆ. ಇದರಿಂದಾಗಿ ಮೌಲ್ಯವರ್ಧನೆಯಾಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎರಡು ಹೊಸ ತಂಡಗಳಿಂದಲೇ ಸರಾಸರಿ ಪ್ರಸಾರ ಹಕ್ಕುಗಳ ಆದಾಯವು 7 ರಿಂದ 10 ಸಾವಿರ ಕೋಟಿಯಾಗುವ ನಿರೀಕ್ಷೆ ಇದೆ. ಅದರಿಂದಾಗಿ ಐದು ವರ್ಷಗಳ ಅವಧಿಯಲ್ಲಿ 35 ರಿಂದ 37ಸಾವಿರ ಕೋಟಿ ರೂಪಾಯಿಯವರೆಗೆ ಹೋಗುವ ಸಂಭವವಿದೆ’ ಎಂದಿದ್ದಾರೆ.

ಹೋದ ಸಲ ಮಾಧ್ಯಮ ಹಕ್ಕುಗಳನ್ನು ಪಡೆಯಲು ಬಿಡ್‌ನಲ್ಲಿ ಸ್ಟಾರ್‌ ಇಂಡಿಯಾ ಮತ್ತು ಸೋನಿ ವಾಹಿನಿಗಳು ಮಾತ್ರ ಇದ್ದವು. ಸೋನಿಗಿಂತ ಸ್ಟಾರ್‌ ₹ 5300 ಕೋಟಿಯಷ್ಟು ಹೆಚ್ಚು ಹಣವನ್ನು ಬಿಡ್ ಮಾಡಿ ಪ್ರಸಾರ ಹಕ್ಕುಗಳನ್ನು ಗೆದ್ದುಕೊಂಡಿತ್ತು. ವಾಲ್ಟ್‌ ಡಿಸ್ನಿ ಕಂಪೆನಿಯ ಅಂಗಸಂಸ್ಥೆಯಾಗಿರುವ ಸ್ಟಾರ್ ಮುಂದಿನ ವರ್ಷದವರೆಗೂ ಹಕ್ಕುಗಳನ್ನು ಹೊಂದಿದೆ.

ಈ ಬಾರಿ ವಿದೇಶಿ ಮಾಧ್ಯಮ ಕಂಪೆನಿಯೊಂದು ಆಸಕ್ತಿ ವಹಿಸುತ್ತಿರುವುದು ಬಿಡ್‌ನಲ್ಲಿ ಪೈಪೋಟಿ ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದರಿಂದಾಗಿ ಆದಾಯದ ಮೂಲವೂ ಹೆಚ್ಚುವ ನಿರೀಕ್ಷೆ ಮಂಡಳಿಗೆ ಇದೆ.

‘ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಫ್ರ್ಯಾಂಚೈಸಿಯ ಒಡೆಯರಾಗಿರುವ ಗ್ಲೇಜರ್ ಫ್ಯಾಮಿಲಿಯು ಐಪಿಎಲ್ ಪ್ರಸಾರ ಹಕ್ಕುಗಳಿಗಾಗಿ ಆಸಕ್ತಿ ಹೊಂದಿದೆ ‌’ ಎಂದು ಮೂಲಗಳು ಖಚಿತಪಡಿಸಿವೆ.

‘ಭಾರತದ ಖ್ಯಾತನಾಮ ಕ್ರಿಕೆಟಿಗರೊಬ್ಬರು ಕೂಡ ಐಪಿಎಲ್‌ ಫ್ರ್ಯಾಂಚೈಸಿಯಲ್ಲಿ ಪಾಲುದಾರರಾಗುವ ಸಾಧ್ಯತೆ ಇದೆ. ಯಾವ ತಂಡದಲ್ಲಿ ಹಣ ವಿನಿಯೋಗಿಸಲಿದ್ದಾರೆಂಬುದು ತಿಳಿದುಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.