ADVERTISEMENT

ಬೆಂಗಳೂರು ಕಾಲ್ತುಳಿತ: KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:17 IST
Last Updated 7 ಜೂನ್ 2025, 16:17 IST
<div class="paragraphs"><p>ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌&nbsp; ಶನಿವಾರ ಮಾಧ್ಯಮಗೊಳೊಂದಿಗೆ ಮಾತನಾಡಿದರು</p></div>

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌  ಶನಿವಾರ ಮಾಧ್ಯಮಗೊಳೊಂದಿಗೆ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಎ. ಶಂಕರ್ ಮತ್ತು ಖಜಾಂಚಿ ಇ.ಎಸ್. ಜಯರಾಮ್ ಅವರು ಶನಿವಾರ ರಾಜೀನಾಮೆ ನೀಡಿದರು. ಸಂಜೆ ನಡೆದ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ರಾಜೀನಾಮೆಯನ್ನು ಅಂಗೀಕರಿಸಲಾಯಿತು. 

ADVERTISEMENT

ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ನಲ್ಲಿ ಮೊದಲ ಸಲ ಪ್ರಶಸ್ತಿ ಗೆದ್ದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ’ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದರಿಂದ 11 ಅಭಿಮಾನಿಗಳು ದುರ್ಮರಣ ಹೊಂದಿದ್ದರು. 56 ಜನರು ಗಾಯಗೊಂಡಿದ್ದರು. ಈ ದುರಂತದ ನೈತಿಕ ಹೊಣೆ ಹೊತ್ತು ಕಾರ್ಯದರ್ಶಿ ಮತ್ತು ಖಜಾಂಚಿ ರಾಜೀನಾಮೆ ನೀಡಿದ್ದಾರೆಂದು ಬೆಳಿಗ್ಗೆ ಕೆಎಸ್‌ಸಿಎ ಇಮೇಲ್ ಮೂಲಕ ಮಾಧ್ಯಮಗಳಿಗೆ ತಿಳಿಸಿತ್ತು.  ಸಂಜೆ ಸುಮಾರು  ಎರಡು ಗಂಟೆ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಇಬ್ಬರೂ ಪದಾಧಿಕಾರಿಗಳ ರಾಜೀನಾಮೆ ಸ್ವೀಕೃತವಾಯಿತು. 

'ನಮ್ಮ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿ ರಾಜೀನಾಮೆ ನೀಡಿದ್ದರಿಂದ ಆಡಳಿತ ಸಮಿತಿಯ ತುರ್ತು ಸಭೆ ಕರೆದಿದ್ದೆ. ಅವರು ನೈತಿಕ ಹೊಣೆ ಹೊತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ಇವತ್ತು ಇಬ್ಬರೂ ಪದಾಧಿಕಾರಿಗಳು ಸಮಿತಿಗೆ ರಾಜೀನಾಮೆ ಸಲ್ಲಿಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಇಬ್ಬರೂ ಮಾಡಿರುವ ಉತ್ತಮ ಕಾರ್ಯಗಳಿಗೆ ಸಭೆಯಲ್ಲಿ ಅಭಿನಂದಿಸಲಾಯಿತು. ರಾಜೀನಾಮೆ ಸ್ವೀಕರಿಸಲಾಯಿತು. ಮುಂದಿನ ನಿರ್ಧಾರಗಳ ಕುರಿತು ತಮಗೆಲ್ಲ ತಿಳಿಸಲಾಗುವುದು’ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಸುದ್ದಿಗಾರರಿಗೆ ಹೇಳಿದರು.


ಸದ್ಯ ರಾಜೀನಾಮೆ ಕೊಟ್ಟವರ ಸ್ಥಾನಗಳಿಗೆ ಹಂಗಾಮಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡುವ ಕುರಿತು ಅವರು ಹೆಸರುಗಳನ್ನು ಅಧ್ಯಕ್ಷರು ಬಹಿರಂಗಗೊಳಿಸಲಿಲ್ಲ. 

ಆದರೆ, ಸಮಿತಿ ಸದಸ್ಯರಾದ ಎಂ.ಎಸ್. ವಿನಯ್ ಮತ್ತು ಮಂಜುನಾಥ ರಾಜು ಅವರ ಹೆಸರುಗಳು ಈ ಸ್ಥಾನಕ್ಕಾಗಿ ಮುಂಚೂಣಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ. 

ಪ್ರಸಕ್ತ ಆಡಳಿತ ಸಮಿತಿಯ ಅವಧಿಯು ಇದೇ ಸೆಪ್ಟೆಂಬರ್ 31ಕ್ಕೆ ಮುಕ್ತಾಯವಾಗಲಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. 

‘ಇಂದಿನ ಸಭೆಯಲ್ಲಿ ಆಡಳಿತ ಸಮಿತಿಯನ್ನು ವಿಸರ್ಜಿಸುವ ಕುರಿತು ಮಾತನಾಡಿಲ್ಲ. ನಮ್ಮದು ಕ್ರಿಕೆಟ್ ಸಂಸ್ಥೆ. ಇಲ್ಲಿಯ ಚಟುವಟಿಕೆಗಳು ಮುಂದುವರಿಯಬೇಕು. ಸಂಸ್ಥೆಗೆ ಧಕ್ಕೆಯಾಗಬಾರದು.  ಆ ಕುರಿತು ಚರ್ಚೆ ನಡೆಸಲಾಯಿತು’ ಎಂದರು. 

ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಮೇಲೆ ಎಫ್‌ಐಆರ್‌ ದಾಖಲಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿದ ಭಟ್, ‘ಈ ಕುರಿತು ನಾನು ಹೆಚ್ಚಿಗೆ ಮಾತನಾಡಲಾಗದು. ಪ್ರಕರಣ ನ್ಯಾಯಾಲಯದಲ್ಲಿದೆ. ಇದೊಂದು ಸೂಕ್ಷ್ಮ ವಿಷಯವಾಗಿದೆ. ಸೂಕ್ತ ಸಮಯ ಬಂದಾಗ ವಿವರ ನೀಡುತ್ತೇನೆ. ನಾನೇ ನಿಮ್ಮೆಲ್ಲರನ್ನೂ ಕರೆದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವೆ’ ಎಂದರು. 

‘ನಾವು ಯಾವುದೇ ವಿಷಯದಿಂದಲೂ ಪಲಾಯನ ಮಾಡುತ್ತಿಲ್ಲ. ತನಿಖೆಗೆ ಎಲ್ಲ ರೀತಿಯಿಂದಲೂ ಬೆಂಬಲಿಸುತ್ತೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.