ADVERTISEMENT

ದೊಡ್ಡ ಮೊತ್ತ ಪೇರಿಸುವ ನಂಬಿಕೆ ಇತ್ತು

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 19:10 IST
Last Updated 1 ಏಪ್ರಿಲ್ 2019, 19:10 IST
ಮಹೇಂದ್ರ ಸಿಂಗ್‌ ಧೋನಿ
ಮಹೇಂದ್ರ ಸಿಂಗ್‌ ಧೋನಿ   

ಚೆನ್ನೈ: ‘ಚೆಪಾಕ್‌ ಅಂಗಳದಲ್ಲಿ ರಾತ್ರಿ ಹೊತ್ತು ಪಿಚ್‌ ಮೇಲೆ ಇಬ್ಬನಿ ಬೀಳುತ್ತದೆ ಎಂಬುದು ಗೊತ್ತಿತ್ತು. ಇದರಿಂದ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನೂ ಅರಿತಿದ್ದೆವು. ಹೀಗಾಗಿ ಆರಂಭದಲ್ಲೇ ಮೂರು ವಿಕೆಟ್‌ ಉರುಳಿದ್ದರೂ ನಾವು ಆರಾಮವಾಗಿಯೇ ಇದ್ದೆವು’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ತಿಳಿಸಿದ್ದಾರೆ.

ಭಾನುವಾರದ ಹೋರಾಟದಲ್ಲಿ ಚೆನ್ನೈ ತಂಡ ಎಂಟು ರನ್‌ಗಳಿಂದ ರಾಜಸ್ಥಾನ್‌ ಎದುರು ಗೆದ್ದಿತ್ತು. ಈ ಪಂದ್ಯದಲ್ಲಿ 46 ಎಸೆತಗಳಲ್ಲಿ ಅಜೇಯ 75ರನ್‌ ಬಾರಿಸಿದ್ದ ಧೋನಿ, ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಭಾಜನರಾಗಿದ್ದರು.

ಪಂದ್ಯದ ಬಳಿಕ ಮಾತನಾಡಿದ ಅವರು ‘ಉತ್ತಮ ಜೊತೆಯಾಟಗಳು ಮೂಡಿಬಂದರೆ ದೊಡ್ಡ ಮೊತ್ತ ಪೇರಿಸಬಹುದು ಎಂಬ ನಂಬಿಕೆ ಇತ್ತು. ಹೀಗಾಗಿ ಅದರತ್ತಲೇ ಹೆಚ್ಚು ಗಮನ ಹರಿಸಿದ್ದೆವು. ಆರಂಭದಲ್ಲಿ ವಿಕೆಟ್‌ ಕಾಪಾಡಿಕೊಂಡು ಕೊನೆಯ ಐದು ಓವರ್‌ಗಳಲ್ಲಿ ವೇಗವಾಗಿ ರನ್‌ ಕಲೆಹಾಕಬೇಕೆಂಬುದೂ ನಮ್ಮ ಯೋಜನೆಯಾಗಿತ್ತು. ಅದಕ್ಕನುಗುಣವಾಗಿ ಆಡಿದ್ದರಿಂದ ಗೆಲುವು ಒಲಿಯಿತು’ ಎಂದರು.

ADVERTISEMENT

ಚೆನ್ನೈ ಅಭಿಮಾನಿಗಳ ಬೆಂಬಲವನ್ನೂ ಧೋನಿ ಕೊಂಡಾಡಿದರು.

‘ತವರಿನಲ್ಲಿ ಪಂದ್ಯಗಳನ್ನು ಆಡುವಾಗ ತುಂಬಾ ಖುಷಿಯಾಗುತ್ತದೆ. ಅಭಿಮಾನಿಗಳು ಪ್ರತಿ ಹಂತದಲ್ಲೂ ಹುರಿದುಂಬಿಸುತ್ತಾರೆ. ಚೆನ್ನೈ ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮೊದಲ ಹತ್ತು ಓವರ್‌ಗಳಲ್ಲಿ ಬೌಲರ್‌ಗಳು ಉತ್ತಮ ಸಾಮರ್ಥ್ಯ ತೋರಿದ್ದರು. ಹೀಗಾಗಿ ಪಂದ್ಯ ನಮ್ಮ ಹಿಡಿತದಲ್ಲಿತ್ತು. ನಂತರ ಧೋನಿ ಅಮೋಘ ಬ್ಯಾಟಿಂಗ್‌ ಮಾಡಿದರು. ಎದುರಾಳಿ ತಂಡದ ಬೌಲರ್‌ಗಳೂ ಚೆನ್ನಾಗಿ ದಾಳಿ ನಡೆಸಿದರು. ಸತತವಾಗಿ ವಿಕೆಟ್‌ ಪಡೆದು ನಮ್ಮ ಗೆಲುವಿನ ಕನಸಿಗೆ ತಣ್ಣೀರು ಸುರಿದರು. ಈ ಸೋಲಿನಿಂದ ತುಂಬಾ ಬೇಸರವಾಗಿದೆ’ ಎಂದು ರಾಜಸ್ಥಾನ್‌ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.