ADVERTISEMENT

ಟೆಸ್ಟ್‌: ಜಿಮ್ಮಿ, ಮ್ಯಾಟಿ ದಾಳಿಗೆ ತತ್ತರಿಸಿದ ಕಿವೀಸ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 2:08 IST
Last Updated 3 ಜೂನ್ 2022, 2:08 IST
ಜಿಮ್ಮಿ ಆ್ಯಂಡರ್ಸನ್ 
ಜಿಮ್ಮಿ ಆ್ಯಂಡರ್ಸನ್    

ಲಂಡನ್: ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತು ಪದಾರ್ಪಣೆ ಮಾಡಿದ ಮ್ಯಾಟಿ ಪಾಟ್ಸ್ ಅವರ ದಾಳಿಗೆ ಗುರುವಾರ ಆರಂಭವಾದ ಟೆಸ್ಟ್‌ ನಲ್ಲಿ ನ್ಯೂಜಿಲೆಂಡ್‌ ತಂಡ ದೂಳೀಪಟವಾಯಿತು.

ಲಾರ್ಡ್ಸ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 40 ಓವರ್‌ಗಳಲ್ಲಿ 132 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವಿಲ್ ಯಂಗ್ ಮತ್ತು ಐದನೇ ಓವರ್‌ನಲ್ಲಿ ಟಾಮ್ ಲಥಾಮ್ ವಿಕೆಟ್‌ ಗಳಿಸಿದ ಜಿಮ್ಮಿ ಕಿವೀಸ್ ಬಳಗಕ್ಕೆ ಬಲವಾದ ಪೆಟ್ಟುಕೊಟ್ಟರು.

ಇದರಿಂದ ಹುರುಪುಗೊಂಡಂತೆ ಕಂಡ ಬಲಗೈ ವೇಗಿ, 23 ವರ್ಷದ ಮ್ಯಾಟಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಗಳಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ ತಮ್ಮ ವಿಕೆಟ್ ಖಾತೆ ತೆರೆದರು. ಇಷ್ಟೇ ಅಲ್ಲ; ಡೆರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಅವರ ವಿಕೆಟ್‌ಗಳನ್ನೂ ಕಬಳಿಸಿದರು. ಇದರಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು. 27 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಕಿವೀಸ್ ಬಳಗದ ಗಾಯಕ್ಕೆ ಮತ್ತೆ ಆ್ಯಂಡರ್ಸನ್ ಬರೆ ಎಳೆದರು. ಕೈಲ್ ಜೆಮಿಸನ್ ಮತ್ತು ಟಿಮ್ ಸೌಥಿ (26 ರನ್) ವಿಕೆಟ್‌ಗಳನ್ನು ಕಬಳಿಸಿದರು. ಇದೆಲ್ಲದರ ನಡುವೆಯೂ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಔಟಾಗದೆ 42) ದಿಟ್ಟತನ ತೋರಿದರು. ಇದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು.

ADVERTISEMENT

ಬೆನ್ ಸ್ಟೋಕ್ಸ್‌ ನಾಯಕತ್ವದಲ್ಲಿ ಇದೇ ಮೊದಲ ಸಲ ಕಣಕ್ಕಿಳಿದಿರುವ ಆತಿಥೇಯರು ಮೊದಲ ದಿನವೇ ಎದುರಾಳಿ ಬಳಗವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ನ್ಯೂಜಿಲೆಂಡ್ : 40 ಓವರ್‌ಗಳಲ್ಲಿ 132 (ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಔಟಾಗದೆ 42, ಟಿಮ್ ಸೌಥಿ 26, ಟ್ರೆಂಟ್ ಬೌಲ್ಟ್ 14, ಟಾಮ್ ಬ್ಲಂಡೆಲ್ 14, ಡೆರಿಲ್ ಮಿಚೆಲ್ 13, ಜೇಮ್ಸ್ ಆ್ಯಂಡರ್ಸನ್ 66ಕ್ಕೆ4, ಮ್ಯಾಟಿ ಪಾಟ್ಸ್‌ 13ಕ್ಕೆ4) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.