ADVERTISEMENT

ರಾರಾಜಿಸಿದ ಜೇಸನ್‌ ರಾಯ್‌

ಕ್ರಿಕೆಟ್‌: ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನಿರಾಸೆ: ಬಾಬರ್‌ ಆಟ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 18 ಮೇ 2019, 19:46 IST
Last Updated 18 ಮೇ 2019, 19:46 IST
ಶತಕ ಗಳಿಸಿದ ಬಳಿಕ ಜೇಸನ್‌ ರಾಯ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಶತಕ ಗಳಿಸಿದ ಬಳಿಕ ಜೇಸನ್‌ ರಾಯ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ನಾಟಿಂಗ್‌ಹ್ಯಾಮ್‌ (ರಾಯಿಟರ್ಸ್‌/ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ (114; 89ಎ, 11ಬೌಂ, 4ಸಿ) ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಹರಿಸಿದ ರನ್‌ ಹೊಳೆಯಲ್ಲಿ ಪಾಕಿಸ್ತಾನದ ಗೆಲುವಿನ ಆಸೆ ಕೊಚ್ಚಿಹೋಯಿತು.

ಶುಕ್ರವಾರ ಹೊನಲು ಬೆಳಕಿನಡಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಮೂರು ವಿಕೆಟ್‌ಗಳಿಂದ ಗೆದ್ದಿತು. ಈ ಮೂಲಕ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ 3–0ಯಿಂದ ಸರಣಿ ಕೈವಶ ಮಾಡಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 340ರನ್‌ ದಾಖಲಿಸಿತು. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಬಾಬರ್‌ ಅಜಂ (115; 112ಎ, 13ಬೌಂ, 1ಸಿ) ಶತಕದ ಸಂಭ್ರಮ ಆಚರಿಸಿದರು.

ADVERTISEMENT

ಫಖಾರ್‌ ಜಮಾನ್‌ (57) ಮತ್ತು ಮೊಹಮ್ಮದ್‌ ಹಫೀಜ್‌ (59) ಕೂಡಾ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿದರು.

ಕಠಿಣ ಗುರಿಯನ್ನು ಆಂಗ್ಲರ ನಾಡಿನ ತಂಡವು 49.3 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ರಾಯ್‌ ಮತ್ತು ಜೇಮ್ಸ್‌ ವಿನ್ಸ್‌ (43; 39ಎ, 6ಬೌಂ) ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 94ರನ್‌ ಗಳಿಸಿದರು. 14ನೇ ಓವರ್‌ನಲ್ಲಿ ವಿನ್ಸ್‌ ಅವರು ಮೊಹಮ್ಮದ್‌ ಹಸನೇನ್‌ಗೆ ವಿಕೆಟ್‌ ಒಪ್ಪಿಸಿದರು.

ನಂತರ ರಾಯ್‌, ರಾರಾಜಿಸಿದರು. ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು. ರಾಯ್‌ ಅಬ್ಬರದ ಆಟದಿಂದಾಗಿ ಇಂಗ್ಲೆಂಡ್‌ ತಂಡದ ಮೊತ್ತ 28ನೇ ಓವರ್‌ನಲ್ಲೇ 200ರ ಗಡಿ ಮುಟ್ಟಿತು.

ನಾಯಕ ಜೋಸ್‌ ಬಟ್ಲರ್‌ ಮತ್ತು ಮೋಯಿನ್‌ ಅಲಿ ಶೂನ್ಯಕ್ಕೆ ಔಟಾಗಿದ್ದರಿಂದ ತಂಡ ಆತಂಕಕ್ಕೆ ಒಳಗಾಗಿತ್ತು. ಆದರೆ ಬೆನ್‌ ಸ್ಟೋಕ್ಸ್‌ (ಔಟಾಗದೆ 71; 64ಎ, 5ಬೌಂ, 3ಸಿ) ಅಜೇಯ ಅರ್ಧಶತಕ ಸಿಡಿಸಿ ಆತಿಥೇಯರನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 340 (ಫಖಾರ್‌ ಜಮಾನ್‌ 57, ಬಾಬರ್‌ ಅಜಂ 115, ಮೊಹಮ್ಮದ್‌ ಹಫೀಜ್‌ 59, ಶೋಯಬ್‌ ಮಲಿಕ್‌ 41, ಸರ್ಫರಾಜ್‌ ಅಹ್ಮದ್‌ ಔಟಾಗದೆ 21; ಜೊಫ್ರಾ ಆರ್ಚರ್‌ 62ಕ್ಕೆ1, ಮಾರ್ಕ್‌ ವುಡ್‌ 71ಕ್ಕೆ2, ಟಾಮ್‌ ಕರನ್‌ 75ಕ್ಕೆ4).

ಇಂಗ್ಲೆಂಡ್‌: 49.3 ಓವರ್‌ಗಳಲ್ಲಿ 7 ವಿಕೆಟ್‌ಗೆ 341 (ಜೇಸನ್‌ ರಾಯ್‌ 114, ಜೇಮ್ಸ್‌ ವಿನ್ಸ್‌ 43, ಜೋ ರೂಟ್‌ 36, ಬೆನ್‌ ಸ್ಟೋಕ್ಸ್‌ ಔಟಾಗದೆ 71, ಟಾಮ್‌ ಕರನ್‌ 31; ಜುನೈದ್‌ ಖಾನ್‌ 85ಕ್ಕೆ1, ಹಸನ್‌ ಅಲಿ 57ಕ್ಕೆ1, ಇಮಾದ್‌ ವಾಸೀಂ 62ಕ್ಕೆ2, ಮೊಹಮ್ಮದ್‌ ಹಸನೇನ್‌ 80ಕ್ಕೆ2, ಶೋಯಬ್‌ ಮಲಿಕ್‌ 4ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ 3 ವಿಕೆಟ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ.

ಪಂದ್ಯಶ್ರೇಷ್ಠ: ಜೇಸನ್‌ ರಾಯ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.