ADVERTISEMENT

ENGvsWI ಟೆಸ್ಟ್ | ವುಡ್ ದಿಟ್ಟ ಆಟ: ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ಗೆ ಜಯ

ಏಜೆನ್ಸೀಸ್
Published 13 ಜುಲೈ 2020, 5:10 IST
Last Updated 13 ಜುಲೈ 2020, 5:10 IST
ವೆಸ್ಟ್‌ ಇಂಡೀಸ್‌ ತಂಡದ ಜರ್ಮೈನ್ ಬ್ಲ್ಯಾಕ್‌ವುಡ್ ಬ್ಯಾಟಿಂಗ್ ವೈಖರಿ –ರಾಯಿಟರ್ಸ್ ಚಿತ್ರ
ವೆಸ್ಟ್‌ ಇಂಡೀಸ್‌ ತಂಡದ ಜರ್ಮೈನ್ ಬ್ಲ್ಯಾಕ್‌ವುಡ್ ಬ್ಯಾಟಿಂಗ್ ವೈಖರಿ –ರಾಯಿಟರ್ಸ್ ಚಿತ್ರ   

ಸೌತಾಂಪ್ಟನ್: ಜರ್ಮೈನ್ ಬ್ಲ್ಯಾಕ್‌ವುಡ್ (95, 154ಎಸೆತ, 12 ಬೌಂಡರಿ) ಶತಕ ಪೂರೈಸಲಿಲ್ಲ. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಕೊರೊನಾ ಕಾಲದ ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್‌ಗಳಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತು. ಮೂರು ಟೆಸ್ಟ್‌ಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.

ಪಂದ್ಯದ ಕೊನೆಯ ದಿನವಾದ ಭಾನುವಾರ ಆತಿಥೇಯ ಇಂಗ್ಲೆಂಡ್ ತಂಡವು ವಿಂಡೀಸ್‌ ಬಳಗಕ್ಕೆ 200 ರನ್‌ಗಳ ಗೆಲುವಿನ ಗುರಿ ನೀಡಿತು. ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ (45ಕ್ಕೆ3) ಅವರ ದಾಳಿಗೆ ವಿಂಡೀಸ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆ ಕುಸಿಯಿತು. ಕೇವಲ 100 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಪತನವಾದವು. ಇದರಿಂದಾಗಿ ಒತ್ತಡದಲ್ಲಿದ್ದ ಪ್ರವಾಸಿ ಬಳಗವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದವರು ಬ್ಲ್ಯಾಕ್‌ವುಡ್. ಅವರಿಗೆ ಶೇನ್ ಡೋರಿಚ್ (20) ಉತ್ತಮ ಜೊತೆ ನೀಡಿದರು. ಗೆಲುವಿಗೆ 11 ರನ್‌ಗಳ ಅಗತ್ಯವಿದ್ದಾಗ ಬ್ಲ್ಯಾಕ್‌ವುಡ್ ಔಟಾದರು. ಆದರೆ, ಕ್ರೀಸ್‌ನಲ್ಲಿದ್ದ ನಾಯಕ ಜೇಸನ್ ಹೋಲ್ಡರ್ ಅವರು ತಂಡವನ್ನು ಜಯದ ದಡ ಸೇರಿಸಿದರು.

ADVERTISEMENT

ಶನಿವಾರ ಇಂಗ್ಲೆಂಡ್ ತಂಡವು 8 ವಿಕೆಟ್‌ಗಳಿಗೆ 284 ರನ್‌ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ ಕ್ರೀಸ್‌ನಲ್ಲಿದ್ದ ಜೋಫ್ರಾ (23 ರನ್) ಆಟದ ಫಲವಾಗಿ ತಂಡವು 300 ಗಡಿ ದಾಟಿತು. 313 ರನ್‌ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್‌:ಮೊದಲ ಇನಿಂಗ್ಸ್
ಇಂಗ್ಲೆಂಡ್:
204, ವೆಸ್ಟ್ ಇಂಡೀಸ್: 318

ಎರಡನೇ ಇನಿಂಗ್ಸ್
ಇಂಗ್ಲೆಂಡ್ 313, ವೆಸ್ಟ್ ಇಂಡೀಸ್: 64.2 ಓವರ್‌ಗಳಲ್ಲಿ 6ಕ್ಕೆ200 (ರಾಸ್ಟನ್ ಚೇಸ್ 37, ಜರ್ಮೈನ್ ಬ್ಲ್ಯಾಕ್‌ವುಡ್ 95, ಶೇನ್ ಡೋರಿಚ್ 20, ಜೇಸನ್ ಹೋಲ್ಡರ್ ಔಟಾಗದೆ 14, ಜೋಫ್ರಾ ಆರ್ಚರ್ 45ಕ್ಕೆ3)

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.