ADVERTISEMENT

ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಅಭ್ಯಾಸ ಪಂದ್ಯ; ಭಾರತಕ್ಕೆ ರೋಚಕ ಗೆಲುವು

ಹರ್ಮನ್‌ಪ್ರೀತ್ ಶತಕದ ವೈಭವ

ಪಿಟಿಐ
Published 27 ಫೆಬ್ರುವರಿ 2022, 14:13 IST
Last Updated 27 ಫೆಬ್ರುವರಿ 2022, 14:13 IST
ಹರ್ಮನ್‌ಪ್ರೀತ್ ಕೌರ್ –ಎಎಫ್‌ಪಿ ಚಿತ್ರ
ಹರ್ಮನ್‌ಪ್ರೀತ್ ಕೌರ್ –ಎಎಫ್‌ಪಿ ಚಿತ್ರ   

ರಾಂಗ್ಯೊರ, ನ್ಯೂಜಿಲೆಂಡ್‌: ಮರಳಿ ಫಾರ್ಮ್‌ಗೆ ಬಂದಿರುವ ಸ್ಫೋಟಕ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್ ಅವರು ಅಮೋಘ ಶತಕದ ಮೂಲಕ ಮಿಂಚಿದರು. ಎಡಗೈ ಸ್ಪಿನ್ನರ್‌, ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರು ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದರು. ಇದರ ಪರಿಣಾಮ ಭಾರತ ತಂಡ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಜಯ ಗಳಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಎರಡು ರನ್‌ಗಳಿಂದದಕ್ಷಿಣ ಆಫ್ರಿಕಾವನ್ನು ಮಣಿಸಿತು. ಕೆಲವು ಕಾಲದಿಂದ ಫಾರ್ಮ್ ಕಳೆದುಕೊಂಡಿದ್ದ ಹರ್ಮನ್‌ಪ್ರೀತ್ ಕೌರ್ ಈಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದರು. ದಕ್ಷಿಣ ಆಫ್ರಿಕಾ ಎದುರಿನ ಹಣಾಹಣಿಯಲ್ಲಿ ಅವರು 114 ಎಸೆತಗಳಲ್ಲಿ 103 ರನ್ ಗಳಿಸಿದರು. 9 ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 9ಕ್ಕೆ 244 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಟ್ (83; 95 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಸೂನೆ ಲುಸ್‌ (86; 98 ಎ, 6 ಬೌಂ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ರಾಜೇಶ್ವರಿ ಗಾಯಕವಾಡ್ ಅವರ ಪ್ರಬಲ ದಾಳಿಗೆ ನಲುಗಿ ಇತರ ಬ್ಯಾಟರ್‌ಗಳು ವೈಫಲ್ಯ ಕಂಡರು. ತಂಡಕ್ಕೆ 7 ವಿಕೆಟ್ ಕಳೆದುಕೊಂಡು 242 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ADVERTISEMENT

ಭಾರತದ ಪರ ಆರಂಭಿಕ ಬ್ಯಾಟರ್ ಯಾಷ್ಟಿಕಾ ಭಾಟಿಯಾ (58; 78 ಎ, 4 ಬೌಂ, 1 ಸಿ) ಅರ್ಧಶತಕ ಗಳಿಸಿ ಮಿಂಚಿದರು. ಐವರು ಎರಡಂಕಿ ಮೊತ್ತ ದಾಟದೆ ಮರಳಿದರು.

ಮಾರ್ಚ್‌ ಆರರಂದು ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳೆಯರು ಪಾಕಿಸ್ತಾನ ಮಹಿಳೆಯರನ್ನು ಎದುರಿಸುವರು. ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 9ಕ್ಕೆ 244 (ಹರ್ಮನ್‌ಪ್ರೀತ್ ಕೌರ್ 103, ಯಾಷ್ಟಿಕ ಭಾಟಿಯಾ 58, ಸ್ನೇಹ್ ರಾಣಾ 14, ಪೂಜಾ ವಸ್ತ್ರಕರ್ 16; ಅಯಬೊಂಗ ಕಾಕ 23ಕ್ಕೆ3); ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7ಕ್ಕೆ 242 (ಲಾರಾ ವೊಲ್ವಾರ್ಟ್‌ 75, ಸೂನ್‌ ಲುಸ್‌ 94; ಮೇಘನಾ ಸಿಂಗ್ 38ಕ್ಕೆ1,ರಾಜೇಶ್ವರಿ ಗಾಯಕವಾಡ್‌ 46ಕ್ಕೆ4, ಸ್ನೇಹ್ ರಾಣ 38ಕ್ಕೆ1, ಪೂನಂ ಯಾದವ್ 54ಕ್ಕೆ1)

ಸ್ಮೃತಿ ಮಂದಾನ ತಲೆಗೆ ಪೆಟ್ಟು

ಭಾರತದ ಇನಿಂಗ್ಸ್‌ ಆರಂಭದಲ್ಲೇ ಆಘಾತ ಕಂಡಿತು. ಯಾಷ್ಟಿಕ ಭಾಟಿಯ ಜೊತೆ ಇನಿಂಗ್ಸ್ ಆರಂಭಿಸಲು ಬಂದ ಸ್ಫೋಟಕ ಬ್ಯಾಟರ್ ಸ್ಮೃತಿ ಮಂದಾನ ಅವರು ತಲೆಗೆ ಗಂಭೀರ ಪೆಟ್ಟುಬಿದ್ದು ಕ್ರೀಸ್‌ ತೊರೆದರು. 23 ಎಸೆತಗಳಲ್ಲಿ 12 ರನ್ ಗಳಿಸಿ ಆಡುತ್ತಿದ್ದ ವೇಳೆ ಶಬ್ನಿಮ್ ಇಸ್ಮಾಯಿಲ್ ಅವರ ಬೌನ್ಸರ್‌ ಸ್ಮೃತಿ ಅವರ ತಲೆಗೆ ಬಡಿಯಿತು. ಹೀಗಾಗಿ ನಿವೃತ್ತಿಯಾಗಿ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.