ಬೆಕೆನ್‌ಹ್ಯಾಮ್, ಇಂಗ್ಲೆಂಡ್: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಅವರಿಗೆ ಹೃದಯಾಘಾತವಾಗಿದ್ದು ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಿಂದಾಗಿ ಗಂಭೀರ್ ಅವರು ಲಂಡನ್‌ನಿಂದ ದೆಹಲಿಗೆ ಮರಳಿದ್ದಾರೆ.
ಇದೇ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದೊಂದಿಗೆ ಗಂಭೀರ್ ತೆರಳಿದ್ದರು.
‘ಗೌತಮ್ ಅವರ ತಾಯಿಗೆ ಬುಧವಾರ ಹೃದಯಾಘಾತವಾಗಿದೆ. ಅದರಿಂದಾಗಿ ಗುರುವಾರವೇ ಗೌತಮ್ ಮತ್ತು ಕುಟುಂಬದ ಸದಸ್ಯರು ದೆಹಲಿಗೆ ಹೋದರು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.
ಗೌತಮ್ ಅವರ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್ ರಿಯಾನ್ ಟೆನ್ ಡಾಷೆಟ್ ಅವರು ತಂಡದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಅವರೊಂದಿಗೆ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರೂ ಇದ್ದಾರೆ. ಶುಕ್ರವಾರ ಭಾರತ ಮತ್ತು ಭಾರತ ಎ ತಂಡದ ನಡುವಣ ಅಭ್ಯಾಸ ಪಂದ್ಯ ಆರಂಭವಾಗಿದೆ.
‘ಗೌತಮ್ ಅವರ ತಾಯಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸದ್ಯ ಐಸಿಯು (ತುರ್ತು ನಿಗಾ ಘಟಕ)ನಲ್ಲಿದ್ದಾರೆ. ಅವರು ಶೀಘ್ರ ಗುಣಮುಖರಾಗುತ್ತಿದ್ದಂತೆಯೇ ಗೌತಮ್ ಇಂಗ್ಲೆಂಡ್‌ಗೆ ಬರಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.