ADVERTISEMENT

ಹಾಕಿ ವಿಶ್ವಕಪ್‌ ಗೆಲ್ಲುವ ವಿಶ್ವಾಸ: ಗೋಲ್‌ಕೀಪರ್‌ ಶ್ರೀಜೇಶ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 13:59 IST
Last Updated 10 ಜನವರಿ 2023, 13:59 IST
ಶ್ರೀಜೇಶ್‌
ಶ್ರೀಜೇಶ್‌   

ರೂರ್ಕೆಲಾ (ಪಿಟಿಐ): ಭಾರತ ತಂಡ ಈ ಬಾರಿ ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಟೂರ್ನಿಯನ್ನು ಜಯಿಸುವ ವಿಶ್ವಾಸವಿದೆ ಎಂದು ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಹೇಳಿದ್ದಾರೆ.

‘2018 ರಲ್ಲಿ ನಮಗೆ ಸೆಮಿಫೈನಲ್‌ ಪ್ರವೇಶಿಸಲು ಆಗಿರಲಿಲ್ಲ. ಕಳೆದ ಬಾರಿ ನೀಡಿದ್ದ ಪ್ರದರ್ಶನವನ್ನು ಉತ್ತಮಪಡಿಸುವ ಮತ್ತೊಂದು ಅವಕಾಶ ನಮಗೆ ಲಭಿಸಿದೆ’ ಎಂದು ನುಡಿದಿದ್ದಾರೆ.

ಭಾರತವು ಹಾಕಿ ವಿಶ್ವಕಪ್‌ ಗೆಲ್ಲದೆ 48 ವರ್ಷಗಳು ಕಳೆದಿವೆ. 1975 ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯದಾಗಿ ಚಾಂಪಿಯನ್‌ ಅಗಿತ್ತು. ಅಜಿತ್‌ ಪಾಲ್‌ ಸಿಂಗ್ ಅವರು ತಂಡದ ನಾಯಕರಾಗಿದ್ದರು.

ADVERTISEMENT

ವಿಶ್ವಕಪ್‌ ಟೂರ್ನಿ ಶುಕ್ರವಾರ ಆರಂಭವಾಗಲಿದ್ದು, ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಸ್ಪೇನ್‌ ವಿರುದ್ಧ ಪೈಪೋಟಿ ನಡೆಸಲಿದೆ.

‘ನಾಲ್ಕನೇ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿರುವುದು ಹೆಮ್ಮೆಯ ಸಂಗತಿ. ಭಾರತದಲ್ಲಿ ನನಗೆ ಇದು ಮೂರನೇ ವಿಶ್ವಕಪ್‌ ಆಗಿದೆ. ತವರು ನೆಲದಲ್ಲಿ ಮೂರು ವಿಶ್ವಕಪ್‌ ಆಡುವ ಅದೃಷ್ಟ ಬೇರೆ ಯಾವುದೇ ಆಟಗಾರನಿಗೆ ಲಭಿಸಿರಲಿಕ್ಕಿಲ್ಲ’ ಎಂದು ಶ್ರೀಜೇಶ್‌ ತಿಳಿಸಿದರು.

‘ಎಷ್ಟು ಟೂರ್ನಿಯಲ್ಲಿ ಆಡಿರುವಿ ಎಂಬುದು ಮುಖ್ಯವೆನಿಸುವುದಿಲ್ಲ. ನಿನಗೆ ಟ್ರೋಫಿ ಗೆಲ್ಲಲು ಆಗಿದೆಯೇ, ಇಲ್ಲವೇ ಎಂಬುದು ಮಾತ್ರ ಇಲ್ಲಿ ಪ್ರಮುಖವಾಗುತ್ತದೆ. ಈ ಬಾರಿಯೂ ನಾನು ಶೇ 100 ರಷ್ಟು ಸಾಮರ್ಥ್ಯದೊಂದಿಗೆ ಆಡುತ್ತೇನೆ. ಟ್ರೋಫಿ ಜಯಿಸುವುದೇ ನಮ್ಮ ಗುರಿ’ ಎಂದರು.

‘2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಟೂರ್ನಿ ನನ್ನ ಮೊದಲ ವಿಶ್ವಕಪ್‌ ಆಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು. ಪಾಕ್‌ ತಂಡದವರು ಗೋಲ್‌ಕೀಪರ್‌ ಅಡ್ರಿಯಾನ್‌ ಡಿಸೋಜಾ ಅವರನ್ನು ಎದುರಿಸುವ ತಂತ್ರಗಾರಿಕೆಯೊಂದಿಗೆ ಬಂದಿದ್ದರು. ಆದರೆ ಪಾಕ್‌ ತಂಡಕ್ಕೆ ಅಚ್ಚರಿ ಉಂಟುಮಾಡುವ ಉದ್ದೇಶದಿಂದ ಕೋಚ್‌, ನನ್ನನ್ನು ಕಣಕ್ಕಿಳಿಸಿದ್ದರು’ ಎಂಬುದನ್ನು ನೆನಪಿಸಿಕೊಂಡರು.

‘ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಪಾಕ್‌ ವಿರುದ್ಧ ಆಡಿದ್ದ ಪಂದ್ಯ ಈಗಲೂ ಚೆನ್ನಾಗಿ ನೆನಪಿದೆ. ಯುವ ಆಟಗಾರನಾಗಿ ನನಗೆ ಅದು ಅತಿದೊಡ್ಡ ಪಂದ್ಯ ಎನಿಸಿಕೊಂಡಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.