ADVERTISEMENT

ಹುಬ್ಬಳ್ಳಿ ಟೈಗರ್ಸ್‌ ಸಾಧಾರಣ ಮೊತ್ತ

ಕೆಪಿಎಲ್ ಕ್ವಾಲಿಫೈಯರ್‌ ಪಂದ್ಯ : ಬೆಳಗಾವಿ ಪ್ಯಾಂಥರ್ಸ್‌ ಗೆಲುವಿಗೆ 155 ರನ್‌ ಗುರಿ

ಮಹಮ್ಮದ್ ನೂಮಾನ್
Published 30 ಆಗಸ್ಟ್ 2019, 20:00 IST
Last Updated 30 ಆಗಸ್ಟ್ 2019, 20:00 IST
ಮೈಸೂರಿನಲ್ಲಿ ಶುಕ್ರವಾರ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದ ಮಹಮ್ಮದ್ ತಾಹ ಅವರು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬೈಟಿಂಗ್ ನಡೆಸಿದ ವೈಖರಿ- - –ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ
ಮೈಸೂರಿನಲ್ಲಿ ಶುಕ್ರವಾರ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದ ಮಹಮ್ಮದ್ ತಾಹ ಅವರು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬೈಟಿಂಗ್ ನಡೆಸಿದ ವೈಖರಿ- - –ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ   

ಮೈಸೂರು: ಮೊಹಮ್ಮದ್‌ ತಾಹ ಅವರ ಬಿರುಸಿನ ಬ್ಯಾಟಿಂಗ್‌ ಬಲದಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಬೆಳಗಾವಿ ಪ್ಯಾಂಥರ್ಸ್‌ ಗೆಲುವಿಗೆ 155 ರನ್‌ಗಳ ಗುರಿ ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ‘ಕ್ವಾಲಿಫೈಯರ್‌–2’ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಟೈಗರ್ಸ್‌ ತಂಡ 20 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟಾಯಿತು.

ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಬಳ್ಳಾರಿ ಟಸ್ಕರ್ಸ್‌ ತಂಡದ ಜತೆ ಪೈಪೋಟಿ ನಡೆಸಲಿದೆ. ಬೆಳಗಾವಿ ಪ್ಯಾಂಥರ್ಸ್ ಈ ಹಿಂದೆ ಮೂರು ಸಲ ಫೈನಲ್‌ ಪ್ರವೇಶಿಸಿದ್ದು, ಒಮ್ಮೆ ಚಾಂಪಿಯನ್‌ ಆಗಿದೆ. ಹುಬ್ಬಳ್ಳಿ ಟೈಗರ್ಸ್‌ ಎರಡು ಸಲ ಫೈನಲ್‌ ಪ್ರವೇಶಿಸಿದ್ದರೂ, ಪ್ರಶಸ್ತಿ ಗೆದ್ದಿಲ್ಲ.

ADVERTISEMENT

ಮತ್ತೆ ಮಿಂಚಿದ ತಾಹ: ಆರಂಭಿಕ ಬ್ಯಾಟ್ಸ್‌ಮನ್‌ ತಾಹ (63, 44 ಎಸೆತ, 9 ಬೌಂ, 1 ಸಿ) ಮತ್ತೊಮ್ಮೆ ಟೈಗರ್ಸ್‌ ತಂಡಕ್ಕೆ ಆಸರೆಯಾದರು. ಈ ಹಿಂದಿನ ಪಂದ್ಯಗಳಲ್ಲಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದ ಅವರು ಶುಕ್ರವಾರವೂ ಬಿರುಸಿನ ಆಟವಾಡಿದರು.

ತಾಹ ಮತ್ತು ಲವನೀತ್ ಸಿಸೋಡಿಯಾಮೊದಲ ವಿಕೆಟ್‌ಗೆ 24 ರನ್‌ ಸೇರಿಸಿದರು. ಸಿಸೋಡಿಯಾ (4) ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದ ರಿತೇಶ್‌ ಭಟ್ಕಳ್ ತಂಡಕ್ಕೆ ಮೊದಲ ಯಶಸ್ಸು ತಂದಿತ್ತರು.

ಎರಡನೇ ವಿಕೆಟ್‌ಗೆ ತಾಹ ಅವರು ನಾಯಕ ಆರ್‌.ವಿನಯ್‌ ಕುಮಾರ್‌ ಜತೆ 40 ರನ್‌ ಕಲೆಹಾಕಿದರು. ಸತತ ಎರಡು ಅರ್ಧಶತಕ ಗಳಿಸಿದ್ದ ವಿನಯ್‌ 9 ರನ್‌ ಗಳಿಸಿ ಔಟಾದರು.

ತಾಹ 12ನೇ ಓವರ್‌ಗಳಲ್ಲಿ ರಿತೇಶ್‌ ಭಟ್ಕಳ್‌ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಪ್ರಯತ್ನಿಸಿ ಝಹೂರ್‌ ಫರೂಕಿಗೆ ಕ್ಯಾಚಿತ್ತು ಔಟಾದರು. ಈ ವೇಳೆ ತಂಡದ ಮೊತ್ತ 91 ಆಗಿತ್ತು. ಆ ಬಳಿಕ ಪ್ಯಾಂಥರ್ಸ್‌ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

ಕೆ.ಬಿ.ಪವನ್‌ 19 ಎಸೆತಗಳಲ್ಲಿ 31 ರನ್‌ ಗಳಿಸಿದರು. ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸಲು ಅವರು ವಿಫಲರಾದರು. ಕೊನೆಯಲ್ಲಿ ಪ್ರವೀಣ್‌ ದುಬೆ (20 ಎಸೆತಗಳಲ್ಲಿ 29 ರನ್) ತಂಡದ ಮೊತ್ತ ಹಿಗ್ಗಿಸಿದರು. ಬೆಳಗಾವಿ ಪ್ಯಾಂಥರ್ಸ್‌ ಪರ ರಿತೇಶ್‌ ಭಟ್ಕಳ್ (26ಕ್ಕೆ 2) ಮತ್ತು ಶ್ರೀಶ ಆಚಾರ್ (34ಕ್ಕೆ 3) ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 155ಕ್ಕೆ ಆಲೌಟ್ (ಮೊಹಮ್ಮದ್ ತಾಹ 63, ಆರ್‌.ವಿನಯ್‌ ಕುಮಾರ್ 9, ಕೆ.ಬಿ.ಪವನ್ 31, ಪ್ರವೀಣ್‌ ದುಬೆ 29, ರಿತೇಶ್‌ ಭಟ್ಕಳ್‌ 26ಕ್ಕೆ 2, ಶುಭಾಂಗ್ ಹೆಗ್ಡೆ 24ಕ್ಕೆ 1, ಶ್ರೀಶ ಆಚಾರ್ 34ಕ್ಕೆ 3)

ಇಂದು ಫೈನಲ್

ಕೆಪಿಎಲ್‌ ಎಂಟನೇ ಆವೃತ್ತಿಯ ಟೂರ್ನಿಯ ಫೈನಲ್‌ ಪಂದ್ಯ ಶನಿವಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಬಳ್ಳಾರಿ ಟಸ್ಕರ್ಸ್‌ ತಂಡ ಫೈನಲ್‌ ಪ್ರವೇಶಿಸಿದ್ದು, ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. 2016 ರಲ್ಲಿ ಫೈನಲ್‌ ಪ್ರವೇಶಿಸಿದ್ದ ಟಸ್ಕರ್ಸ್‌ ಪ್ರಶಸ್ತಿ ಜಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.