ADVERTISEMENT

ಇಂದಿನಿಂದ ಯುವ ಕ್ರಿಕೆಟ್‌ ‘ಉತ್ಸವ’

19 ವರ್ಷದೊಳಗಿನವರ ವಿಶ್ವಕಪ್‌: ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ–ಅಫ್ಗಾನಿಸ್ತಾನ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST
ಇಂಗ್ಲೆಂಡ್‌ ತಂಡದ ಜಾರ್ಜ್‌ ಬಾಲ್ಡರ್ಸನ್‌, ಭಾರತದ ಪ್ರಿಯಂ ಗರ್ಗ್‌, ದಕ್ಷಿಣ ಆಫ್ರಿಕಾದ ಬ್ರೈಸ್‌ ಪಾರ್ಸನ್ಸ್‌ ಮತ್ತು ಅಫ್ಗಾನಿಸ್ತಾನದ ಫರ್ಹಾನ್‌ ಜಾಕೀಲ್‌ ಅವರು ಟ್ರೋಫಿಯೊಂದಿಗೆ –ಐಸಿಸಿ ಚಿತ್ರ
ಇಂಗ್ಲೆಂಡ್‌ ತಂಡದ ಜಾರ್ಜ್‌ ಬಾಲ್ಡರ್ಸನ್‌, ಭಾರತದ ಪ್ರಿಯಂ ಗರ್ಗ್‌, ದಕ್ಷಿಣ ಆಫ್ರಿಕಾದ ಬ್ರೈಸ್‌ ಪಾರ್ಸನ್ಸ್‌ ಮತ್ತು ಅಫ್ಗಾನಿಸ್ತಾನದ ಫರ್ಹಾನ್‌ ಜಾಕೀಲ್‌ ಅವರು ಟ್ರೋಫಿಯೊಂದಿಗೆ –ಐಸಿಸಿ ಚಿತ್ರ   

ಕೇಪ್‌ಟೌನ್‌: ಹೊಸ ವರ್ಷದ ಸಂಭ್ರಮ ಮರೆಯಾಗುವ ಮುನ್ನವೇ ಹರಿಣಗಳ ನಾಡಿನಲ್ಲಿ ಯುವ ಕ್ರಿಕೆಟ್‌ ‘ಉತ್ಸವ’ ಶುರುವಾಗಿದೆ.

19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನ 13ನೇ ಆವೃತ್ತಿಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸುತ್ತಿದ್ದು, ಶುಕ್ರವಾರ ಟೂರ್ನಿಗೆ ಚಾಲನೆ ಸಿಗಲಿದೆ. 24 ದಿನಗಳ ಕಾಲ ನಡೆಯುವ ‘ಹಬ್ಬ’ದಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಹೊಸ ತಾರೆಗಳ ಉಗಮಕ್ಕೆ ವೇದಿಕೆಯಾಗಿರುವ ಯುವ ವಿಶ್ವಕಪ್‌ಗೆ ಈ ಬಾರಿ ಜಪಾನ್‌ ಮತ್ತು ನೈಜೀರಿಯಾ ಪದಾರ್ಪಣೆ ಮಾಡುತ್ತಿವೆ. ‘ಕ್ರಿಕೆಟ್‌ ಕೂಸು’ಗಳೆಂದೇ ಬಿಂಬಿತವಾಗಿರುವ ಈ ತಂಡಗಳು ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳಿಗೆ ‘ಸಡ್ಡು’ ಹೊಡೆಯಲಿವೆಯೇ ಎಂಬ ಕುತೂಹಲ ಕ್ರಿಕೆಟ್‌ ಪ್ರಿಯರಲ್ಲಿ ಗರಿಗೆದರಿದೆ.

ADVERTISEMENT

ಟೂರ್ನಿಯಲ್ಲಿ ಅತಿ ಹೆಚ್ಚು (ನಾಲ್ಕು) ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿರುವ ಭಾರತ, ಮತ್ತೊಂದು ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಶುಕ್ರವಾರ ‘ವಜ್ರಗಳ ನಗರಿ’ ಕಿಂಬರ್ಲಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ಮುಖಾಮುಖಿಯಾಗಲಿವೆ.

ಯಾವ್ಯಾವ ಸ್ಥಳಗಳಲ್ಲಿ ಪಂದ್ಯ

22 ವರ್ಷಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಆಯೋಜನೆಯಾಗಿದೆ. ಈ ಬಾರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಕಿಂಬರ್ಲಿ, ಬ್ಲೂಮ್‌ಫೊಂಟೆನ್‌, ಪೊಷೆಫ್‌ಸ್ಟ್ರೂಮ್‌ ಮತ್ತು ಬೆನೊನಿ ನಗರಗಳಲ್ಲಿ ಪಂದ್ಯಗಳು ಆಯೋಜನೆಯಾಗಿವೆ.

ಯಾರು ಪ್ರಶಸ್ತಿ ಗೆಲ್ಲಬಹುದು

ನಾಲ್ಕು ಬಾರಿಯ ಚಾಂಪಿಯನ್‌ ಭಾರತ, ಈ ಸಲವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳೂ ಪ್ರಶಸ್ತಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳಲ್ಲಿಯೂ ಭರವಸೆಯ ಆಟಗಾರರಿದ್ದಾರೆ. ಹೀಗಾಗಿ ಈ ತಂಡಗಳನ್ನೂ ಕಡೆಗಣಿಸುವಂತಿಲ್ಲ.

ಪಂದ್ಯ ‘ಟೈ’ ಆದರೆ ?

ಲೀಗ್‌ ಹಂತದಲ್ಲಿ ಪಂದ್ಯ ‘ಟೈ’ ಆದರೆ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್‌ ನೀಡಲಾಗುತ್ತದೆ. ನಾಕೌಟ್‌ ಹಂತದ ಹೋರಾಟ ‘ಟೈ’ ಆದರೆ ‘ಸೂಪರ್‌ ಓವರ್‌’ ಆಡಿಸಲಾಗುತ್ತದೆ. ‘ಸೂಪರ್ ಓವರ್‌’ನಲ್ಲೂ ಸಮಬಲ ಕಂಡುಬಂದರೆ ಮತ್ತೆ ‘ಸೂಪರ್‌ ಓವರ್‌’ ಮೊರೆ ಹೋಗಲಾಗುತ್ತದೆ. ಸ್ಪಷ್ಟ ಫಲಿತಾಂಶ ಬರುವವರೆಗೂ ‘ಸೂಪರ್‌ ಓವರ್‌’ ಮುಂದುವರಿಯುತ್ತದೆ.

ಯಾವ ಗುಂಪಿನಲ್ಲಿ ಯಾರು?

ಎ ಗುಂಪು: ಭಾರತ, ಜಪಾನ್‌, ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾ.

ಬಿ ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್‌, ನೈಜೀರಿಯಾ ಮತ್ತು ವೆಸ್ಟ್‌ ಇಂಡೀಸ್‌.

ಸಿ ಗುಂಪು: ಬಾಂಗ್ಲಾದೇಶ, ಪಾಕಿಸ್ತಾನ, ಸ್ಕಾಟ್ಲೆಂಡ್‌ ಮತ್ತು ಜಿಂಬಾಬ್ವೆ.

ಡಿ ಗುಂಪು: ಅಫ್ಗಾನಿಸ್ತಾನ, ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.