ADVERTISEMENT

IND vs AUS: ಗಾಬಾದಲ್ಲೂ ಸಿರಾಜ್‌ಗೆ ಮುಂದುವರಿದ ನಿಂದನೆ

ಏಜೆನ್ಸೀಸ್
Published 15 ಜನವರಿ 2021, 11:20 IST
Last Updated 15 ಜನವರಿ 2021, 11:20 IST
ವಾಷಿಂಗ್ಟನ್ ಸುಂದರ್, ಅಜಿಂಕ್ಯ ರಹಾನೆ ಹಾಗೂ ಮೊಹಮ್ಮದ್ ಸಿರಾಜ್
ವಾಷಿಂಗ್ಟನ್ ಸುಂದರ್, ಅಜಿಂಕ್ಯ ರಹಾನೆ ಹಾಗೂ ಮೊಹಮ್ಮದ್ ಸಿರಾಜ್   

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತೀಯ ಆಟಗಾರರ ವಿರುದ್ಧ ನಿಂದನೆ ಮುಂದುವರಿದಿದೆ. ಅಶಿಸ್ತಿನ ಆಸೀಸ್ ಅಭಿಮಾನಿಗಳ ಗುಂಪೊಂದು, ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಬಗ್ಗೆ ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ವರದಿ ಮಾಡಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಜನಾಂಗೀಯ ನಿಂದನೆಯನ್ನು ಎದುರಿಸಿದ್ದರು. ಈಗ ಗಾಬಾದಲ್ಲೂ ಮುಂದುವರಿದಿದ್ದು, ಅಭಿಮಾನಿಗಳ ಗುಂಪು 'ಹುಳ' ಎಂದು ನಿಂದಿಸಿದೆ.

ಸಿಡ್ನಿ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬೂಮ್ರಾ ವಿರುದ್ಧ ನಡೆದ ಜನಾಂಗೀಯ ನಿಂದನೆ ವಿರುದ್ಧ ಭಾರತವು ಅಧಿಕೃತವಾಗಿ ದೂರು ದಾಖಲಿಸಿತ್ತು. ನಾಲ್ಕನೇ ದಿನದಾಟದಲ್ಲೂ ಇದು ಮುಂದುವರಿದಾಗ ಫೀಲ್ಡ್ ಅಂಪೈರ್ ನೆರವಿನಿಂದ ಆಪಾದಿತ ಆರು ಮಂದಿ ಪ್ರೇಕ್ಷಕರನ್ನು ಹೊರ ಹಾಕಲಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ಈ ಸಂಬಂಧ ತನಿಖೆಯನ್ನು ನಡೆಸುತ್ತಿದೆ.

ADVERTISEMENT

ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ವರದಿ ಪ್ರಕಾರ, ಗಾಬಾದಲ್ಲಿ ಶುಕ್ರವಾರಆರಂಭವಾದ ಮೊದಲ ದಿನದಾಟದಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಪ್ರೇಕ್ಷಕರ ಗುಂಪೊಂದು ಹುಳ ಎಂದು ಪದೇ ಪದೇ ನಿಂದಿಸುತ್ತಿದ್ದರು.

ಸಿರಾಜ್‌ಗೆ ಮಾತ್ರವಲ್ಲದೆ ಪದಾರ್ಪಣಾ ಆಟಗಾರ ವಾಷಿಂಗ್ಟನ್ ಸುಂದರ್ ಅವರಿಗೂ ಈ ಕಹಿ ಅನುಭವ ಎದುರಾಗಿದೆ. ನನ್ನ ಹಿಂದಿರುವ ಪ್ರೇಕ್ಷಕರು ಸುಂದರ್ ಹಾಗೂ ಸಿರಾಜ್ ಅವರನ್ನು ಹುಳ ಎಂದು ನಿಂದಿಸುತ್ತಿದ್ದರು. ಇಲ್ಲೂ ಸಿರಾಜ್ ಅವರನ್ನು ಗುರಿಯಾಗಿಸಿ ಆರಂಭಿಸಲಾಗಿತ್ತು. ಅಲ್ಲದೆ ಸಿಡ್ನಿಗೆ ಹೋಲುವಂತಿತ್ತು ಎಂದು ಕೇಟ್ ಎಂಬ ಪ್ರೇಕ್ಷಕನ ಹೇಳಿಕೆಯನ್ನು ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ಉಲ್ಲೇಖಿಸಿದೆ.

ಸಿಡ್ನಿ ಘಟನೆಯ ಬಳಿಕ ಆಸೀಸ್ ಪ್ರೇಕ್ಷಕರು ಉದ್ದೇಶಪೂರ್ವಕವಾಗಿಯೇ ಸಿರಾಜ್ ಅವರನ್ನು ಗುರಿಯಾಗಿಸುತ್ತಿದೆ. ಇದೀಗ ಗಾಬಾದಲ್ಲೂ ಮುಂದುವರಿದಿದ್ದು, ಈ ಬಗ್ಗೆ ಸದ್ಯಕ್ಕೆ ಟೀಮ್ ಇಂಡಿಯಾ ಆಟಗಾರರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.