ADVERTISEMENT

IND vs SA: ದ.ಆಫ್ರಿಕಾ ದಿಟ್ಟ ಉತ್ತರ; ಸೋಲಿನ ಭೀತಿಯಲ್ಲಿ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2022, 16:11 IST
Last Updated 5 ಜನವರಿ 2022, 16:11 IST
ಭಾರತ vs ದಕ್ಷಿಣ ಆಫ್ರಿಕಾ
ಭಾರತ vs ದಕ್ಷಿಣ ಆಫ್ರಿಕಾ   

ಜೋಹಾನ್ಸ್‌ಬರ್ಗ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 260 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿರುವ ದಕ್ಷಿಣ ಆಫ್ರಿಕಾ, ಮೂರನೇ ದಿನದ ಅಂತ್ಯಕ್ಕೆ 40 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ.

ಇನ್ನೆರಡು ದಿನಗಳು ಬಾಕಿ ಉಳಿದಿರುವಂತೆ ದಕ್ಷಿಣ ಆಫ್ರಿಕಾ ಗೆಲುವಿಗೆ ಇನ್ನೂ 122 ರನ್ ಮಾತ್ರ ಅಗತ್ಯವಿದೆ. ಇದರೊಂದಿಗೆ ಭಾರತ ಸೋಲಿನ ಭೀತಿಯಲ್ಲಿದೆ. ಉಳಿದಿರುವ ಎಂಟು ವಿಕೆಟ್‌ಗಳನ್ನು ಆದಷ್ಟು ಬೇಗನೇ ಕಬಳಿಸುವ ಒತ್ತಡಕ್ಕೆ ಸಿಲುಕಿದೆ.

ದಕ್ಷಿಣ ಆಫ್ರಿಕಾ ತಂಡವುಏಡೆನ್ ಮಾರ್ಕರಮ್ (31) ಹಾಗೂ ಕೀಗನ್ ಪೀಟರ್ಸನ್ (28) ವಿಕೆಟ್‌ಗಳನ್ನು ಕಳೆದುಕೊಂಡಿದೆ. ನಾಯಕ ಡೀನ್ ಎಲ್ಗರ್ (46*) ಹಾಗೂ ರಸ್ಸಿ ವ್ಯಾನ್ ಡರ್ ಡಸೆ (11*) ದಿಟ್ಟ ಹೋರಾಟ ನೀಡುತ್ತಿದ್ದಾರೆ.

ADVERTISEMENT

ಈ ಮೊದಲು ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 266 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿಗೆ 240 ರನ್‌ಗಳ ಗುರಿ ಒಡ್ಡಿತ್ತು.

ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ ಪೂಜಾರ (53), ಅಂಜಿಕ್ಯ ರಹಾನೆ (58) ಹಾಗೂ ಹನುಮ ವಿಹಾರಿ (40*) ಟೀಮ್ ಇಂಡಿಯಾಗೆ ನೆರವಾದರು. ಶಾರ್ದೂಲ್ ಠಾಕೂರ್ ಸಹ 28 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಸತತ ವೈಫಲ್ಯಗಳನ್ನು ಅನುಭವಿಸಿರುವ ಪೂಜಾರ ಹಾಗೂ ರಹಾನೆ ಆಕರ್ಷಕ ಅರ್ಧಶತಕಗಳನ್ನು ಗಳಿಸುವ ಮೂಲಕ ಗಮನ ಸೆಳೆದರು. ಈ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು.

ಮೂರನೇ ವಿಕೆಟ್‌ಗೆ ಶತಕದ (111) ಜೊತೆಯಾಟ ಕಟ್ಟಿದ ಈ ಜೋಡಿಯು ತಂಡಕ್ಕೆ ಆಸರೆಯಾದರು. ಆದರೆ ಅರ್ಧಶತಕಗಳ ಬೆನ್ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ಪೂಜಾರ 53 ಹಾಗೂ ರಹಾನೆ 58 ರನ್ ಗಳಿಸಿ ಔಟಾದರು. ಈ ಜೊತೆಯಾಟವನ್ನು ಮುರಿದ ಕಗಿಸೊ ರಬಾಡ ಮಗದೊಮ್ಮೆ ಮಾರಕವಾಗಿ ಕಾಡಿದರು. ಇದರಿಂದಾಗಿ 184 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ರಿಷಭ್ ಪಂತ್ (0) ಹಾಗೂ ರವಿಚಂದ್ರನ್ ಅಶ್ವಿನ್ (16) ವೈಫಲ್ಯ ಅನುಭವಿಸಿದರು.

ಕೊನೆಯ ಹಂತದಲ್ಲಿ ಹನುಮ ವಿಹಾರಿ 40 ರನ್ ಗಳಿಸಿ ಔಟಾಗದೆ ಉಳಿದರು. ಶಾರ್ದೂಲ್ ಠಾಕೂರ್ 28 ರನ್‌ಗಳ ಕೊಡುಗೆ ನೀಡಿದರು. ಇತರೆ ರೂಪದಲ್ಲಿ 33 ರನ್ ಹರಿದು ಬಂದವು. ಇನ್ನುಳಿದಂತೆ ಮೊಹಮ್ಮದ್ ಶಮಿ (0) ಹಾಗೂ ಜಸ್‌ಪ್ರೀತ್ ಬೂಮ್ರಾ (7) ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ಮಾರ್ಕೊ ಜ್ಯಾನ್ಸನ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ಭಾರತದ 202 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌ನಲ್ಲಿ 229 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಶಾರ್ದೂಲ್ ಠಾಕೂರ್ 61 ರನ್ ತೆತ್ತು ಏಳು ವಿಕೆಟ್ ಕಬಳಿಸಿ ಮಿಂಚಿದರು. ಆದರೂ ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್ ಅಂತರದ ಹಿನ್ನಡೆಗೊಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.