ADVERTISEMENT

2ನೇ ಟಿ–20 ಪಂದ್ಯ: ಭರ್ಜರಿ ರನ್ ಹೊಳೆಯಲ್ಲಿ ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 7:43 IST
Last Updated 3 ಅಕ್ಟೋಬರ್ 2022, 7:43 IST
ಡಿ ಕಾಕ್
ಡಿ ಕಾಕ್   

ಗುವಾಹಟಿ (ಪಿಟಿಐ): ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದ ಎರಡನೇ ಟಿ20 ಪಂದ್ಯವನ್ನು 16 ರನ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ರಲ್ಲಿ ಮುನ್ನಡೆ ಸಾಧಿಸಿತು.

ಭಾರತ ನೀಡಿದ್ದ 238 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಕಠಿಣ ಪ್ರತಿರೋಧ ತೋರಿ 3 ವಿಕೆಟ್ ನಷ್ಟಕ್ಕೆ 20 ಒವರ್‌ಗಳಲ್ಲಿ 221 ರನ್‌ಗಳನ್ನು ಗಳಿಸಲು ಶಕ್ತವಾಯಿತು.

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಸೂರ್ಯಕುಮಾರ್‌ ಯಾದವ್‌ ಅಬ್ಬರದ ಅರ್ಧಶತಕದ(61) ನೆರವಿನಿಂದ 238 ರನ್‌ಗಳ ಕಠಿಣ ಸವಾಲೊಡ್ಡಿತ್ತು.

ADVERTISEMENT

ಅಸ್ಸಾಂ ರಾಜಧಾನಿ ಬರ್ಸಾಪುರದಲ್ಲಿರುವ ಡಾ.ಭೂಪೆನ್ ಹಜಾರಿಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಭಾರತ ಕೇವಲ 3 ವಿಕೆಟ್‌ ನಷ್ಟಕ್ಕೆ 237 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು.

ಆರಂಭಿಕರಾಗಿ ಮೈದಾನಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌ 96 ರನ್‌ಗಳ ಜೊತೆಯಾಟದೊಂದಿಗೆ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 1 ಸಿಕ್ಸ್‌ ಹಾಗೂ 7 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 43 ರನ್‌ ಗಳಿಸಿದ ರೋಹಿತ್‌ ಶರ್ಮಾ 9.5ನೇ ಓವರ್‌ನಲ್ಲಿ ಸ್ಟಬಸ್‌ಗೆ ಕ್ಯಾಚ್‌ ಇತ್ತು ನಿರ್ಗಮಿಸಿದರು. ಆಕರ್ಷಕ ಅರ್ಧಶತಕದೊಂದಿಗೆ ಬಿರುಸಿನ ಆಟವಾಡುತ್ತಿದ್ದ ಕೆ.ಎಲ್‌.ರಾಹುಲ್‌ 28 ಎಸೆತಗಳಲ್ಲಿ 57 ರನ್‌ಗಳಿಸಿ ಮಹರಾಜಗೆ ವಿಕೆಟ್‌ ಒಪ್ಪಿಸಿದರು.

ನಂತರ ವಿರಾಟ್‌ ಕೊಹ್ಲಿಗೆ ಜೊತೆಯಾದ ಸೂರ್ಯಕುಮಾರ್‌ ಯಾದವ್‌ 22 ಎಸೆತಗಳಲ್ಲಿ 61 ರನ್‌ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 5 ಬೌಂಡರಿ, 5 ಸಿಕ್ಸ್‌ ಸಿಡಿಸಿದ ಯಾದವ್‌, 18ನೇ ಓವರ್‌ನಲ್ಲಿ ರನ್‌ ಔಟ್‌ ಆದರು. ವಿರಾಟ್‌ ಕೊಹ್ಲಿ ಅಜೇಯ 49 ಹಾಗೂ ದಿನೇಶ್‌ ಕಾರ್ತಿಕ್‌ ಅಜೇಯ 17 ರನ್‌ಗಳ ಕಾಣಿಕೆಯೊಂದಿಗೆ ದ.ಆಫ್ರಿಕಾಕ್ಕೆ 238 ರನ್‌ಗಳ ಕಠಿಣ ಗುರಿ ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ದ.ಆಫ್ರಿಕಾ ಪರ ಕೇಶವ್‌ ಮಹರಾಜ್‌ 23 ರನ್‌ಗಳಿಗೆ 2 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಆರ್ಶದೀಪ್‌ ಸಿಂಗ್‌ ಮಾರಕ ದಾಳಿಗೆ ತತ್ತರಿಸುವ ದ.ಆಫ್ರಿಕಾ 5ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಪಂದ್ಯ ಗೆಲ್ಲುವ ಮೂಲಕ ಸರಣಿ ಕೈವಶವಾಗಿಸಿಕೊಳ್ಳುವ ತವಕದಲ್ಲಿ ಭಾರತ ತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.