ADVERTISEMENT

ಹರ್ಮನ್‌ಪ್ರೀತ್ ‍ಪಡೆಗೆ ಶ್ರೀಲಂಕಾ ಸವಾಲು

ಮೊದಲ ಮಹಿಳಾ ಟಿ20 ಪಂದ್ಯ: ಭಾರತಕ್ಕೆ ಜಯದ ವಿಶ್ವಾಸ

ಪಿಟಿಐ
Published 22 ಜೂನ್ 2022, 14:15 IST
Last Updated 22 ಜೂನ್ 2022, 14:15 IST
ಹರ್ಮನ್‌ಪ್ರೀತ್ ಕೌರ್‌
ಹರ್ಮನ್‌ಪ್ರೀತ್ ಕೌರ್‌   

ಡಂಬುಲಾ: ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಭಾರತ ತಂಡದ ನಾಯಕತ್ವ ವಹಿಸಿರುವ ಹರ್ಮನ್‌ಪ್ರೀತ್ ಕೌರ್ ಗುರುವಾರ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡದ ಸವಾಲಿಗೆ ಸಜ್ಜಾಗಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಇಲ್ಲಿ ನಡೆಯಲಿದ್ದು, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧವಾಗುತ್ತಿರುವ ಭಾರತ ತಂಡವು ಇಲ್ಲಿ ಉತ್ತಮ ಸಾಮರ್ಥ್ಯ ತೋರುವ ತವಕದಲ್ಲಿದೆ.

2022ರ ವಿಶ್ವಕಪ್ ಬಳಿಕ ಭಾರತ ಆಡಲಿರುವ ಮೊದಲ ಸರಣಿ ಇದು. ಈ ತಿಂಗಳ ಆರಂಭದಲ್ಲಿ ತಂಡದ ಪ್ರಮುಖ ಆಟಗಾರ್ತಿ ಮಿಥಾಲಿ ರಾಜ್ ಎಲ್ಲ ಮಾದರಿಗಳಿಗೆ ವಿದಾಯ ಹೇಳಿದ್ದರು. ಅವರ ಅನುಪಸ್ಥಿತಿಯಲ್ಲಿ ತಂಡ ಮೊದಲ ಬಾರಿ ಕಣಕ್ಕಿಳಿಯಲಿದೆ.

ADVERTISEMENT

ಮಿಥಾಲಿ ದಾಖಲೆ ಮೀರುವತ್ತ ಹರ್ಮನ್‌ಪ್ರೀತ್‌: 33 ವರ್ಷದ ಬ್ಯಾಟರ್‌ ಹರ್ಮನ್‌ಪ್ರೀತ್ ಟಿ20 ಮಾದರಿಯಲ್ಲಿ ಮಿಥಾಲಿ ದಾಖಲೆಯನ್ನು ಮೀರುವ ಹಾದಿಯಲ್ಲಿದ್ದಾರೆ. 121 ಪಂದ್ಯಗಳನ್ನು ಆಡಿರುವ ಹರ್ಮನ್‌ಪ್ರೀತ್‌ 2319 ರನ್‌ ಕಲೆಹಾಕಿದ್ದು, ಇನ್ನು 46 ರನ್‌ ಗಳಿಸಿದರೆ ಮಿಥಾಲಿ (2364) ಅವರ ರನ್‌ ದಾಖಲೆ ಮೀರಲಿದ್ದಾರೆ.

ಹೋದ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮಣಿಯುವ ಮುನ್ನ ಭಾರತ ಸತತ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ರೀತಿಯ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸುವ ವಿಶ್ವಾಸದಲ್ಲಿದೆ.

ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ವೇಗಿ ಪೂಜಾ ವಸ್ತ್ರಕಾರ್ ಭಾರತ ತಂಡದ ಶಕ್ತಿಯಾಗಿದ್ದಾರೆ.

ಪಾಕಿಸ್ತಾನ ಎದುರು ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ 0–3ರಿಂದ ವೈಟ್‌ವಾಶ್ ಅನುಭವಿಸಿರುವ ಶ್ರೀಲಂಕಾ ತಂಡವು ಈ ಪಂದ್ಯದ ಮೂಲಕ ಪುಟಿದೇಳುವ ಹಂಬಲದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 2.30 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.