ADVERTISEMENT

ದಕ್ಷಿಣ ಆಫ್ರಿಕಾ, ವಿಂಡೀಸ್ ವಿರುದ್ಧ ಸರಣಿ: ದೆಹಲಿ, ಕೋಲ್ಕತ್ತದ ಪಂದ್ಯಗಳ ಬದಲಾವಣೆ

ಪಿಟಿಐ
Published 9 ಜೂನ್ 2025, 14:53 IST
Last Updated 9 ಜೂನ್ 2025, 14:53 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ ತಂಡದ ಭಾರತ ಪ್ರವಾಸದ ವೇಳಾಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಕೆಲವು ಬದಲಾವಣೆಗಳನ್ನು ಮಾಡಿದೆ. ಕೋಲ್ಕತ್ತದ ಈಡನ್ ಗಾರ್ಡನ್ ಮತ್ತು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಟೆಸ್ಟ್‌ ಪಂದ್ಯಗಳನ್ನು ಅದಲುಬದಲು ಮಾಡಲಾಗಿದೆ.

ಭಾರತ ತಂಡವು ತವರಿನಲ್ಲಿ ವೆಸ್ಟ್‌ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್‌ 2ರಂದು ಅಹಮದಾಬಾದಿನಲ್ಲಿ ನಡೆಯಲಿದೆ. ಆದರೆ ಮೂಲ ವೇಳಾಪಟ್ಟಿಯಂತೆ ಕೋಲ್ಕತ್ತದಲ್ಲಿ ಅ. 10ರಿಂದ ನಿಗದಿ ಆಗಿದ್ದ ಎರಡನೇ ಟೆಸ್ಟ್‌ ಪಂದ್ಯವು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ನವದೆಹಲಿಯಲ್ಲಿ ನಡೆಯಲಿದೆ.

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಎದುರು ನವೆಂಬರ್‌ 14ರಂದು ಆರಂಭವಾಗುವ ಮೊದಲ ಟೆಸ್ಟ್ ಪಂದ್ಯವನ್ನು ನವದೆಹಲಿಯಿಂದ ಕೋಲ್ಕತ್ತಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ADVERTISEMENT

ತಾಣ ಬದಲಾವಣೆಗೆ ಬಿಸಿಸಿಐ ಕಾರಣ ಉಲ್ಲೇಖಿಸಿಲ್ಲ. ಆದರೆ ರಾ‌ಷ್ಟ್ರ ರಾಜಧಾನಿಯಲ್ಲಿ ವರ್ಷದ ಆ ಅವಧಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯುವ ಅಪಾಯ ಇರುವುದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಇಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ವೇಳೆ ಉಸಿರಾಟದ ಸಮಸ್ಯೆಯಿಂದ ಶ್ರೀಲಂಕಾ ಆಟಗಾರರು ಮಾಸ್ಕ್‌ ಧರಿಸಿ ಆಡಿದ್ದರು. 

ದಕ್ಷಿಣ ಆಫ್ರಿಕಾ ತಂಡವು ತನ್ನ ಪ್ರವಾಸದಲ್ಲಿ ಮೂರೂ ಮಾದರಿಯ ಪಂದ್ಯಗಳನ್ನು ಆಡಲಿದೆ. ಎರಡು ಟೆಸ್ಟ್‌, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.

ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣವು ಟೆಸ್ಟ್‌ ಪಂದ್ಯದ ಆತಿಥ್ಯ ವಹಿಸಲಿರುವ ಹೊಸ ಕ್ರೀಡಾಂಗಣ ಎನಿಸಲಿದೆ. ಇಲ್ಲಿ ಹರಿಣಗಳ ಪಡೆಯ ವಿರುದ್ಧ ನವೆಂಬರ್ 22 ರಿಂದ 26ರವರೆಗೆ ಎರಡನೇ ಟೆಸ್ಟ್‌ ನಡೆಯಲಿದೆ.

ಮೂರು ಏಕದಿನ ಪಂದ್ಯಗಳು ರಾಂಚಿ (ನ. 30), ರಾಯಪುರ (ಡಿ. 3) ಮತ್ತು ರಾಯಪುರದಲ್ಲಿ (ಡಿ. 3) ನಡೆಯಲಿವೆ. ಐದು ಟಿ20 ಪಂದ್ಯಗಳು ಕ್ರಮವಾಗಿ ಕಟಕ್ (ಡಿ. 9), ಚಂಡೀಗಢ (ಡಿ. 11), ಧರ್ಮಶಾಲಾ (ಡಿ. 14), ಲಖನೌ (ಡಿ. 17) ಮತ್ತು ಅಹಮದಾಬಾದಿನಲ್ಲಿ (ಡಿ 19) ನಡೆಯಲಿವೆ.

ಚೆನ್ನೈ ಪಂದ್ಯ ಬದಲು:

ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಸೆ. 14ರಂದು ಮಹಿಳಾ ಏಕದಿನ ಪಂದ್ಯದ ಆತಿಥ್ಯ ವಹಿಸಲು ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಅಸಹಾಯಕತೆ ವ್ಯಕ್ತಪಡಿಸಿದೆ. ಈ ಪಂದ್ಯಗಳು ಸೆ. 30ರಂದು ಆರಂಭವಾಗುವ ಮಹಿಳಾ ಏಕದಿನ ವಿಶ್ವಕಪ್‌ಗೆ ತಾಲೀಮು ಆಗಿದ್ದವು.

ಹೀಗಾಗಿ ಮೊದಲ ಎರಡು ಪಂದ್ಯಗಳನ್ನು ಮುಲ್ಲನಪುರದಲ್ಲಿ ಆಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.