ADVERTISEMENT

ಭಾರತ–ಆಸ್ಟ್ರೇಲಿಯಾ ಸರಣಿಗೆ ಪರ್ತ್‌ ಅಂಗಣ ಅಲಭ್ಯ?

ಪಿಟಿಐ
Published 7 ಸೆಪ್ಟೆಂಬರ್ 2020, 14:08 IST
Last Updated 7 ಸೆಪ್ಟೆಂಬರ್ 2020, 14:08 IST
ಕ್ರಿಕೆಟ್‌ ಆಸ್ಟ್ರೇಲಿಯಾ ಲೋಗೊ
ಕ್ರಿಕೆಟ್‌ ಆಸ್ಟ್ರೇಲಿಯಾ ಲೋಗೊ   

ಮೆಲ್ಬರ್ನ್‌ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸವು ಪರ್ತ್‌ ಬದಲಿಗೆ ಅಡಿಲೇಡ್‌ ಅಥವಾ ಬ್ರಿಸ್ಬೇನ್‌ ಮೂಲಕ ಆರಂಭವಾಗಲಿದೆ. ಪರ್ತ್‌ ಅಂಗಣವಿರುವ ಪಶ್ಚಿಮ ಆಸ್ಟ್ರೇಲಿಯಾ ಪ್ರದೇಶದಲ್ಲಿ ಕೋವಿಡ್‌–19 ತಡೆಗಾಗಿ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡುವುದಿಲ್ಲ ಎಂದು ಅಲ್ಲಿಯ ಸರ್ಕಾರ ಹೇಳಿದೆ. ಹೀಗಾಗಿ ಅಲ್ಲಿಯ ಕ್ರೀಡಾಂಗಣಗಳು ಪಂದ್ಯ ನಡೆಸಲು ಲಭ್ಯವಾಗಲಿಕ್ಕಿಲ್ಲ ಎಂದು ವರದಿಯಾಗಿದೆ.

ವಿಕ್ಟೋರಿಯಾ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಒಂದು ವೇಳೆ ಮೆಲ್ಬರ್ನ್‌ ಕ್ರೀಡಾಂಗಣ ಲಭ್ಯವಾಗದಿದ್ದಲ್ಲಿ, ಹಗಲು–ರಾತ್ರಿ ಪಂದ್ಯ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್‌ ಸೇರಿದಂತೆ ಸತತ ಪಂದ್ಯಗಳನ್ನು ಅಡಿಲೇಡ್‌ನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತದೆ‘ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು, ಯುಎಇಯಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿ ಮುಗಿಸಿಕೊಂಡು ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.

ADVERTISEMENT

‘ಹೆಚ್ಚಿನ ಅಪಾಯವಿರುವ ಅನ್ಯ ದೇಶದಿಂದ ಆಟಗಾರರುಹಿಂದಿರುಗಿದ ಬಳಿಕ ಇಲ್ಲಿ ಕ್ವಾರಂಟೈನ್‌ ಇಲ್ಲದೆ ಅಭ್ಯಾಸ ನಡೆಸುವುದು ಒಪ್ಪಿತವಲ್ಲ ಎಂದು ನನ್ನ ಅನಿಸಿಕೆ‘ ಎಂದು ಪಶ್ಚಿಮ ಆಸ್ಟ್ರೇಲಿಯಾ ಸರ್ಕಾರದ ಮುಖ್ಯಸ್ಥ ಮಾರ್ಕ್‌ ಮೆಕ್‌ಗೋವನ್‌ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಹಾಗೂ ಐಪಿಎಲ್‌ ಟೂರ್ನಿ ಮುಗಿಸಿಕೊಂಡು ಬರುವ ಭಾರತದ ಆಟಗಾರರು, ಸರಣಿಗೂ ಮುನ್ನ ಪರ್ತ್‌ನಲ್ಲಿ ಕ್ವಾರಂಟೈನ್‌ ಇಲ್ಲದೆ ತರಬೇತಿ ನಡೆಸಲಿದ್ದರು. ಆದರೆ ಪಶ್ಚಿಮ ಆಸ್ಟ್ರೇಲಿಯಾ ಸರ್ಕಾರ, ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್‌ ನಿಯಮ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.