ADVERTISEMENT

ಐಪಿಎಲ್‌ನ ಮೊದಲ ಹ್ಯಾಟ್ರಿಕ್‌: ಕರನ್‌ ಹ್ಯಾಟ್ರಿಕ್‌; ಕಿಂಗ್ಸ್‌ ಜಯಭೇರಿ

ಅಶ್ವಿನ್‌, ಮೊಹಮ್ಮದ್ ಶಮಿಗೆ ತಲಾ ಎರಡು ವಿಕೆಟ್‌: ರಿಷಭ್‌, ಕಾಲಿನ್ ಇಂಗ್ರಾಮ್ ಯತ್ನ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:29 IST
Last Updated 1 ಏಪ್ರಿಲ್ 2019, 20:29 IST
   

ಮೊಹಾಲಿ: ಯುವ ವೇಗಿ, ಎಡಗೈ ಬೌಲರ್‌ ಸ್ಯಾಮ್ ಕರನ್‌ ಮಿಂಚಿನ ದಾಳಿ ಮೂಲಕ ಈ ಬಾರಿಯ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದರು. ನಾಯಕ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿ ಮಾಡಿದರು. ಅವರಿಗೆ ವೇಗಿ ಮೊಹಮ್ಮದ್ ಶಮಿ ಉತ್ತಮ ಸಹಕಾರ ನೀಡಿದರು.

ಈ ಮೂವರ ಕೆಚ್ಚೆದೆಯ ಆಟದ ಪರಿಣಾಮ, ಕಿಂಗ್ಸ್ ಇಲೆವನ್‌ ಪಂಜಾಬ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು ಜಯಭೇರಿ ಮೊಳಗಿಸಿತು.

ಐ.ಎಸ್‌. ಬಿಂದ್ರಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್ಸ್ ನೀಡಿದ 167 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಒಂದು ಹಂತದಲ್ಲಿ ಸುಲಭವಾಗಿ ಜಯ ಗಳಿಸುವ ಭರವಸೆ ಮೂಡಿಸಿತು. ಆದರೆ ಅಂತಿಮ ಓವರ್‌ಗಳಲ್ಲಿ ಕಿಂಗ್ಸ್ ಇಲೆವನ್‌ ತಂಡದವರು ಜಯವನ್ನು ಕಸಿದುಕೊಂಡರು.

ADVERTISEMENT

ಆರಂಭಿಕ ಸಂಕಷ್ಟ: ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್‌ ತಂಡ ಸರ್ಫರಾಜ್ ಖಾನ್‌ ಮತ್ತು ಡೇವಿಡ್‌ ಮಿಲ್ಲರ್‌ ಜೋಡಿಯ ಅರ್ಧಶತಕದ ಜೊತೆಯಾಟದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ವಿಕೆಟ್‌ ಕೀಪರ್‌ ಕೆ.ಎಲ್‌.ರಾಹುಲ್‌ ಎರಡನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿದ್ದರು. 11 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 15 ರನ್‌ ಗಳಿಸಿದ್ದ ಕನ್ನಡಿಗ ರಾಹುಲ್‌ ಅವರನ್ನು ಕ್ರಿಸ್‌ ಮಾರಿಸ್‌ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು.

ಕ್ರಿಸ್‌ ಗೇಲ್ ಬದಲು ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದ ಸ್ಯಾಮ್‌ ಕರನ್‌ ಅವರನ್ನು ಸ್ಪಿನ್ನರ್‌ ಸಂದೀಪ್‌ ಲಮಿಚಾನೆ ವಾಪಸ್ ಕಳುಹಿಸಿದರು. ಮಯಂಕ್‌ ಅಗರವಾಲ್‌ (6) ಕೂಡಾ ಬಂದಷ್ಟೇ ವೇಗವಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದಾಗ ಕಿಂಗ್ಸ್‌ ಇಲೆವನ್‌ ಖಾತೆಯಲ್ಲಿ ಇದ್ದದ್ದು 58 ರನ್‌.

ಈ ಸಂದರ್ಭದಲ್ಲಿ ಸರ್ಫರಾಜ್‌ (39; 29ಎ, 6ಬೌಂ) ಮತ್ತು ಮಿಲ್ಲರ್‌ (43; 30ಎ, 4ಬೌಂ, 2ಸಿ) ಛಲದಿಂದ ಹೋರಾಡಿದರು.

ಈ ಜೋಡಿ ನಾಲ್ಕನೇ ವಿಕೆಟ್‌ಗೆ 62 ರನ್‌ ಸೇರಿಸಿದ್ದರಿಂದ ತಂಡದ ಮೊತ್ತ ಮೂರಂಕಿ ಗಡಿ ದಾಟಿತು. 14ನೇ ಓವರ್‌ ಬೌಲ್‌ ಮಾಡಿದ ಲಮಿಚಾನೆ ಐದನೇ ಎಸೆತದಲ್ಲಿ ಸರ್ಫರಾಜ್‌ ವಿಕೆಟ್‌ ಪಡೆದು ಡೆಲ್ಲಿ ತಂಡದ ಸಂಭ್ರಮಕ್ಕೆ ಕಾರಣರಾದರು.

17.3 ಓವರ್‌ಗಳಲ್ಲಿ 146ರನ್ ಗಳಿಸಿದ್ದ ಕಿಂಗ್ಸ್‌ ಇಲೆವನ್‌ ನಂತರ ಕುಸಿತದ ಹಾದಿ ಹಿಡಿಯಿತು.

ಹಾರ್ಡಸ್‌ ವಿಲ್ಜಾನ್‌, ನಾಯಕ ಅಶ್ವಿನ್‌ ಮತ್ತು ಮುರುಗನ್‌ ಅಶ್ವಿನ್‌ ಒಂದಂಕಿ ಮೊತ್ತಕ್ಕೆ ವಿಕೆಟ್‌ ನೀಡಿದರು. ಮೊಹಮ್ಮದ್‌ ಶಮಿ ಸೊನ್ನೆ ಸುತ್ತಿದರು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಎದೆಗುಂದದೆ ಆಡಿದ ಮನದೀಪ್‌ ಸಿಂಗ್‌ (ಅಜೇಯ 29; 21ಎ, 2ಬೌಂ, 1ಸಿ) ತಂಡ 160ರ ಗಡಿ ದಾಟಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.